#ಯಾಕಾಗಬಾರದು ಬಿಸಿಲ ನಾಡಲ್ಲಿ ಹಸಿರು ಕ್ರಾಂತಿ...
ಅಬ್ಬಬ್ಬಾ... ಏನ್ ಬಿಸಿಲು ಮಾರಾಯ.. ಎಷ್ಟೊಂದು ಧಗೆ, ಮೈಯೆಲ್ಲಾ ನೀರು ಬಸ್ತು ಹೋಯ್ತು.. ಎನ್ನುವ ಮಾತುಗಳು ಕೇಳಿ ಬರುವುದು ಆ ಪ್ರದೇಶದಲ್ಲಿ...
ಅದು.. ಉತ್ತರ ಕರ್ನಾಟಕ...
ಬಿಸಿಲು ಎಂದರೆ ಥಟ್ಟನೆ ನೆನಪಾಗುವುದು ಅತಿ ಹೆಚ್ಚು ತಾಪಮಾನ ಇರುವ ಉತ್ತರ ಕರ್ನಾಟಕ ಪ್ರದೇಶ. ಇಲ್ಲಿನ ಜನ ಬಿಸಿಲಿಗೆ ಬೆಸ್ತು ಬಿದ್ದಿದ್ದಾರೆ. ಏನಪ್ಪಾ... ಈ ಬಿರು ಬಿಸಿಲು... ಎಂದು ತತ್ತರಿಸುವಂತಹ ಪರಿಸ್ಥಿತಿ.
ಮನುಷ್ಯರಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳು, ಹಕ್ಕಿ ಪಿಕ್ಕಿಗಳು, ಕ್ರಿಮಿ ಕೀಟಗಳು, ಜಲಚರಗಳು ಬಿಸಿಲ ಬೇಗೆ ತಾಳಲಾಗದೆ ಬೆದರಿ ಬೆಂಡಾಗಿ ಬದುಕುವ ಸ್ಥಿತಿ.
ಹಾಗಾದರೆ ಬಿಸಿಲಿಗೆ ಮೂಲ ಕಾರಣ ಏನು..? ಗಿಡ ಮರಗಳು ಇಲ್ಲದೆ ಇರುವುದು...
ಈ ಪ್ರದೇಶದಲ್ಲಿ ಗಿಡ ಮರಗಳನ್ನು ಬೆಳೆಸಿ ಬಿಸಿಲ ನಾಡು ಎನ್ನುವ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲವೇ..!? ಅಥವಾ ಇಲ್ಲಿ ಗಿಡ ಮರಗಳನ್ನು ನೆಡಲು ಆಗುವುದಿಲ್ಲವೇ..? ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ.
ಹೆಚ್ಚು ನೀರಿರದ ಪ್ರದೇಶಗಳಲ್ಲಿ ಸಾಲು ಮರಗಳನ್ನು ನೆಟ್ಟು ಹಸಿರು ವಾತಾವರಣದಿಂದ ಕಂಗೊಳಿಸುವಂತೆ ಮಾಡಲಾಗಿದೆ. ಸಮೃದ್ಧಿ ತಾಣವನ್ನಾಗಿ ನಿರ್ಮಿಸಲಾಗಿದೆ.
ಇದು ನೀರಾವರಿ ಇರುವ ಪ್ರದೇಶ, ನದಿಗಳು ಹರಿಯುವ ನಾಡು, ಕೆರೆ, ಕುಂಟೆಗಳಿರುವ ಬೀಡು. ಇಲ್ಲಿ ಅದೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಜನ ಸಾಮಾನ್ಯರ ಅಳಲು.
ಬೆಟ್ಟ ಗುಡ್ಡಗಳಲ್ಲಿ ಬಿರು ಬಿಸಿಲಿನ ಹೊಡೆತಕ್ಕೆ ಸಿಲುಕಿದ ಕಲ್ಲು ಬಂಡೆಗಳ ಮಧ್ಯೆ ಹಸಿರು ಚಿಗುರಿಸಿ ಬಿಸಿಲ ಬಾಧೆಯಿಂದ ತಪ್ಪಿಸಬೇಕಾಗಿದೆ.
ಸರ್ಕಾರಿ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಪರಿಸರ ಬೆಳೆಸಲು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರು, ಪರಿಸರವಾದಿಗಳ ಆಶಯ.
ಹನಿ ಹನಿಗೂಡಿದರೆ ಹಳ್ಳ... ತೆನೆ ತೆನೆ ಕೂಡಿದರೆ ಬಳ್ಳ.. ಗಿಡಗಳು ಸೇರಿದರೆ ವನ... ಮರಗಳು ಸೇರಿದರೆ ಬನ.....