Wednesday, 10 June 2015

ಮಂದಹಾಸದ ಮದನಾರಿ...


ಅವಳು ಉಸಿರು ಉಸಿರಲ್ಲೂ ಬೆರೆತಿರುವಳು
ಹಸಿರ ಹಸಿರಲ್ಲೂ ಅವಳಿರುವಳು
ನನ್ನವಳು ಮೆಲ್ಲನೆ ನಗುವವಳು
ಮೊಗದಲ್ಲಿ ಮಂದಹಾಸ ಬೀರುವವಳು
--
ಗಡಿಬಿಡಿಯಲ್ಲಿ ನನಗೆ ಮಾಡುವಳು ಗಂಜಿ
ಗಂಜಿ ಕುಡಿಯುವೆ ನನ್ನವಳಿಗೆ ಅಂಜಿ
ಗಲ್ಲದ ಮೇಲೆ ಗುಳಿಕೆನ್ನೆ ಗುಲಗಂಜಿ
ಗುಣದಲ್ಲಿ ಗೆಲ್ಲುವಳು ನನ್ನ ಪುಟ್ನಂಜಿ
--
ನಗು ನಗುತಾ ಸಾಗಿಸುವಳು ಬದುಕು
ಬದುಕಲ್ಲಿ ಬರುವುದಿಲ್ಲ ಯಾವುದೇ ತೊಡಕು
ನನ್ನವಳು ನನ್ನೆದುರಿಗಿದ್ದರೆ ನನಗಷ್ಟೇ ಸಾಕು
ನನಗೆ ಜೀವನಪೂರ್ತಿ ಅವಳದೇ ಮೆಲುಕು
--
ಅವಳು ನಕ್ಕರೆ ಹಾಲು-ಜೇನು ಸಕ್ಕರೆ
ನಗು ಚೆಲ್ಲಿದರೆ ಹರಿಯಿತು ಜಲಧಾರೆ
ನಗುವಿನಲ್ಲೇ ಉಣಬಡಿಸುವಳು ನನ್ನ ನೀರೆ
ಪ್ರತಿಜನ್ಮದಲ್ಲೂ ನೀನೆ ಸಖಿಯಾಗಿ ಬಾರೇ




Tuesday, 2 June 2015

ಅಭಿಮಾನದ ಅಲೆಯಲ್ಲಿ...

ನನ್ನ ಗೆಳತಿಗೆ ನಾ ಅಭಿಮಾನಿ
ಅವಳು ತುಂಬಾ ಸ್ವಾಭಿಮಾನಿ
ಎದೆ ಆಳೋ ದೊರೆಸಾಲಿನಿ
ಮಿಡಿಯುತಿದೆ ಸದಾ ನನ್ನ ದನಿ
--
ನೆನಪಿನ ಅಲೆಯಲ್ಲಿ ನಾ ತೇಲಿ
ಹೃದಯದ ಸುತ್ತ ಹಾಕಿದ್ಲು ಬೇಲಿ
ಅವಳಿಗೆ ಹಾಡುತ್ತ ಕುಳಿತೆ ನಾ ಲಾಲಿ
ಸಿಹಿ ನಿದ್ರೆಗೆ ಜಾರಿದ್ಲು ಸುವ್ವಾಲಿ
--
ವರ್ಷಧಾರೆ ಇಳೆಗೆ ಜಾರಿತು ಹನಿಹನಿ
ಧರೆಗೆ ಬಂದು ಕರಗಿತು ಇಬ್ಬನಿ
ನನ್ನವಳು ಭುವಿಗೆ ಬಂದಿಳಿದ ಅಶ್ವಿನಿ
ಕ್ಷಣ ಕಾಣದಿದ್ದರೆ ಇಳಿಯಿತು ಕಂಬನಿ
--
ಹನಿ ರೂಪದಲ್ಲಾಯ್ತು ವರುಣ ಸಿಂಚನ
ಅನುರಾಗದ ಅಲೆಯಲ್ಲಿ ತೇಲಿತು ಮನ
ಅವಳಿಂದ ಸಿಗುವುದೇ ನನಗೆ ಸ್ಪಂದನ
ಅವಳಿಗಾಗಿ ನಾ ಕಾದಿರುವೆ ಪ್ರತಿದಿನ




Monday, 1 June 2015

ನಿಮ್ಮ ಜೀವನಕ್ಕಿಲ್ಲ ಪ್ರೊಟೆಕ್ಟ್...

ಹುಡುಗಿಯರಿಗೆ ಹೊಡೀತಾರೆ 
ಎಲ್ಲರೂ ಲೈನ್
ಅವಳು ಸಿಗಲಿಲ್ಲವೆಂದು ಕೊನೆಗೆ 
ಕೈಲಿಡೀತಾರೆ ವೈನ್
ನೀವೆಲ್ಲ ಜೀವನದಲ್ಲಿ ಜಿಗುಪ್ಸೆ
ಹೊಂದದಿದ್ದರೆ ಫೈನ್
--
ಎಲ್ಲರಿಗೂ ಅವಳಿಂದ ಆಗುತ್ತೆ
ಇನ್ ಸ್ಪೈರ್
ಕೆಲವೊಂದು ಸಲ ಕಾದಿರುತ್ತೆ
ಮಿಸ್ ಫೈರ್
ನೀವು ಮಾಡಿಕೊಳ್ಳದಿದ್ದರೆ ಉತ್ತಮ
ಡಿಸ್ ಫಿಗರ್
--
ಅವಳಿಗಾಗಿ ನಿಮ್ಮ ಹೃದಯ ಮಾಡಿರ್ತೀರಿ
ಎಕ್ಸ್ ಪೋರ್ಟ್
ಅಲ್ಲಿ ಜಾಗ ಸಿಗದಿದ್ದಾಗ ಹೃದಯ ಬರುತ್ತೆ
ಇಂಪೋರ್ಟ್
ಅವಳಿಂದ ಸೂಚನೆ ಬರದಿದ್ದಾಗ ನೀವಾಗ್ತೀರಿ
ಪೋರ್ಟ್
--
ನಿಮ್ಮ ಪ್ರೇಯಸಿಗೆ ನೀವು ನೀಡಿದ್ದೀರಿ
ಎಷ್ಟೋ ಗಿಫ್ಟ್
ನಿಮ್ಮ ಜೀವನಕ್ಕಿಲ್ಲ ಯಾವುದೇ ರೀತಿ
ಪ್ರೊಟೆಕ್ಟ್
ಸುಂದರ ಜೀವನ ಹಾಳು ಮಾಡಿಕೊಳ್ಳದಿರಿ
ಇದು ನನ್ನ ಸಜೆಸ್ಟ್




Sunday, 31 May 2015

ಬರೆಯಲ್ಲ ರಕ್ತದಲ್ಲಿ ಪತ್ರ...

ಗೆಳತಿ, ನಿನಗಾಗಿ ನಾ ಬರೆಯಲ್ಲ
ರಕ್ತದಲ್ಲಿ ಪತ್ರ
ಹೃದಯದಲ್ಲಿ ನಾ ಬಿಡಿಸಿಕೊಂಡಿರುವೆ 
ನಿನ್ನ ವರ್ಣಚಿತ್ರ
ನಿನ್ನ ಹೆಸರಲ್ಲಿ ನಾ ದಾನ ಮಾಡುವೆ
ಮೈಯಲ್ಲಿನ ನೆತ್ತರ..
ಪ್ರೇಯಸಿ, ನನಗೇನಾದ್ರೂ ಪರವಾಗಿಲ್ಲ
ನೀ ಪಡಬೇಡ ತತ್ತರ..
ನಿನ್ನ ಮೇಲೆ ನನಗೆ ಅಪಾರ ಪ್ರೇಮ
ಒಪ್ಪಿ ಬರ್ತಿಯಾ ಹತ್ತಿರ..
--
ಮನದಲ್ಲಿ ಮನೆ ಮಾಡಿದ ಮನದರಸಿ
ನೀನೇ ನನಗೆ ಮಿತ್ರ
ಪದಪುಂಜಗಳ ಪೋಣಿಸಿ ವರ್ಣಿಸಲಾಗದೇ
ನಾ ನಿಂತೆ ವಿಚಿತ್ರ
ನಿನ್ನಂತರಂಗ ಸೌಂದರ್ಯಕೆ ಮರುಳಾಗಿ
ಬರೆಯಲಿಲ್ಲ ಪತ್ರ
ನನ್ನ ಒಡಲ ಮೇಲೆ ಮೂಡಿಸಿಕೊಳ್ಳುವುದಿಲ್ಲ
ನಿನ್ನ ಹೆಸರಾ..
ನನ್ನಂತರಂಗದಲ್ಲಿ ಅಚ್ಚೊತ್ತಾಗಿದೆ ನಿನ್ನ
ನಯನಗಳ ಚಿತ್ತಾರ..




Friday, 29 May 2015

ಜಸ್ಟ್ ಮಾತು ಮಾತಲ್ಲಿ...

ನೀಟಾಗಿದೆ ನಿನ್ನ ಡ್ರೆಸ್ ಕೋಡ್
ನಿನ್ನಲ್ಲಿಲ್ಲ ಅಹಂಕಾರದ ಕೋಡು
ಸ್ವಲ್ಪ ಇಗೋ ಬಿಟ್ಟು ಮಾತಾಡು
ಕೋಪಿಸಿಕೊಳ್ಳಬೇಡ ಜಸ್ಟ್ ಡು
--
ಅಟೆನ್ಷನ್ ನಲ್ಲಿ ನಿಂತು ನೀ ಕೇಳು
ಡು ಆರ್ ಡೈ ಅಂತಿದೆ ನನ್ನ ಬಾಳು
ನೀನಿಲ್ಲದಿದ್ದರೆ ಜೀವನ ಬರೀ ಗೋಳು
ಅಚೀವ್ ಮಾಡಲು ಏನಾದ್ರೂ ಹೇಳು
--
ಡಿಯರ್.. ನೀನೊಂದು ಸ್ಕೈ..
ನಿನಗಾಗಿ ನಾ ಮಾಡುವೆ ಟ್ರೈ
ಖಂಡಿತಾ, ನೀ ಸಿಗದಿದ್ದೆರೆ ನಾ ಡೈ
ನಾ ಸತ್ತರೆ ನಿನಗೆ ಬರುತ್ತಾ ಕ್ರೈ..
--
ನೀ ಸಿಗುವ ಡಿಸೈರ್ ನನ್ನಲ್ಲಿ..
ಡಿಸೈನ್ ಡಿಸೈನ್ ಮಾತುಗಳು ನಿನ್ನಲ್ಲಿ
ನೀ ಡಿಫರೆಂಟ್ ನನ್ನ ಕಣ್ಣಲ್ಲಿ
ಡೆಫಿನಿಷನ್ ಉಂಟು ನಿನ್ನ ಮಾತಲ್ಲಿ..




Monday, 25 May 2015

ನಿನದೇ ಆಲಾಪ...

ನೀ ನಡೆದರೆ ನವಿಲು..
ನೀ ನುಡಿದರೆ ಕೋಗಿಲೆ
ನಿನ್ನ ಒಲುಮೆಗೆ ನಾ ಬಲೆ
ಸ್ರವಿಸಲಿ ಪ್ರೀತಿಯ ಸೆಲೆ
--
ನನ್ನಲ್ಲಿ ನಿನಗೆ ಬಲು ಕೋಪ
ಬೇಡ ನನ್ನ ಮೇಲೆ ಪ್ರತಾಪ
ದಿನವಿಡೀ ನಿನದೇ ಆಲಾಪ
ಮನದಲ್ಲಿ ನಡೆದಿದೆ ಕಲಾಪ
--
ನಿನ್ನ ಕಣ್ಣಲ್ಲಿ ಅದೇನೋ ಮಿಂಚು
ಹಾಕ್ತಿದೆ ಮನ ನಿನಗಾಗಿ ಹೊಂಚು
ನೀ ನೀಡದಿರು ನನಗೆ ಪಂಚ್
ನನ್ನ ಪ್ರೇಮದಲ್ಲಿಲ್ಲ ಸಂಚು
--
ನಿನ್ನಂತರಂಗದಲ್ಲಿ ಅಪಾರ ಪ್ರೀತಿ
ಮೂಡ್ತಿಲ್ಲ ಭಾವನೆಗಳ ಅಭಿವ್ಯಕ್ತಿ
ಸರಿಯಲ್ಲ ನೀನಾಡುವ ರೀತಿ
ಹರಡಲಿ ಒಲವಿನ ಕೀರ್ತಿ...




Sunday, 24 May 2015

ಗೆಳತಿಗೆ ನಮನ...

ನಗುವಿನೊಂದಿಗೆ ನಿನಗೆ ನಮನ
ಕಣ್ಮುಂದೆ ಕಾಣ್ತಿದೆ ಸುಂದರ ಕಾನನ
ಮನಸ್ಸಿನಲ್ಲಿ ನಿನದೇ ಮನನ
ನೀ ಮಾಡದಿರು ಅದರ ಹನನ
--
ನಿನಗಾಗಿ ಈ ನನ್ನ ಜನನ
ಎಲ್ಲಿದ್ದರೂ ನಿನ್ನಲ್ಲೇ ಗಮನ
ಬರೆಯಲೇ ಒಂದು ಹನಿಗವನ
ತರದಿರು ನೀ ನನಗೆ ಮರಣ
--
ಹೃದಯದಲ್ಲಿ ತನನಂ ತನನ..
ಮನದಲ್ಲಿ ನಿನದೇ ನೆನಪಿನ ತಿಲ್ಲಾನ..
ಕನಸಿನಲ್ಲಿ ಬರೆದ ಒಲವಿನ ಕವನ
ಮಾಡದಿರು ಪ್ರೇಮದ ಹರಣ
--
ಗೆಳತಿ ನೀನೆ ನನಗೆ ತನುಮನ
ನೆನಪಲ್ಲೇ ಸಾಗ್ತಿದೆ ಬಾಳ ಪಯಣ
ಮುರಿಯುವೆಯಾ ನಿನ್ನ ಮೌನ
ಸನಿಹ ಬಂದರೆ ರೋಮಾಂಚನ
--
ತುಂತುರು ಹನಿಗಳ ಸಿಂಚನ
ಹೃದಯದಲ್ಲಿ ಒಂದು ಸಂಚಲನ
ಕಾದಿದೆ ಒಲವಿಗಾಗಿ ನನ್ನ ಮನ
ಓ ಗೆಳತಿ, ನಿನಗೆ ನನ್ನ ನಮನ