Tuesday, 25 August 2015

ಜನನಿ ಜನ್ಮದ ಜೀವನಾಡಿ..

ಹೊತ್ತಿಲ್ಲದ ಹೊತ್ತಲ್ಲಿ ಅಪ್ಪಿದಳು
ಕಂದಮ್ಮ ಅಳುವ ಧ್ವನಿ ಕೇಳಿ..
ಹುಣ್ಣಿಮೆ ಚಂದಿರನ ತೋರಿಸಿದಳು
ಮಗುವಿಗೆ ಲಾಲಿಹಾಡ ಹೇಳಿ..
--
ಎದೆಹಾಲು ಬಯಸಿ ಅಳುವಾಗ..
ಸಂಭ್ರಮದಿ ಹಾಲುಣಿಸಿದಳು
ಮುದ್ದು ಮಗುವಿನ ಮಹದಾಯಿ
ಕಂದನಿಗಾಗಿ ಸದಾ ಸಹೃದಯಿ..
--
ಅತ್ತು ಸನ್ನೆ ಮಾಡಿತು ಆಸರೆಗಾಗಿ..

ಕಂದ ಅತ್ತರೆ ಚಡಪಡಿಸಿದಳು..
ಓಡಿ ಬಂದು ಬಿಗಿದಪ್ಪಿದಳು..
ಕರುಳ ಬಳ್ಳಿ ಅಳಲು ಬಿಡಲೊಲ್ಲಳು
--
ಪಂಚಾಮೃತ ಕ್ಷೀರದ ಪಾರ ಮಾಡಿದಳು
ಮಮಕಾರದಿ ಮಗುವಾ ಮುದ್ದಾಡಿ..
ಮುದ್ದು ಕಂದನ ಕಂಗಳ ಕಂಡು ನಲಿದಳು
ಅವಳಾದಳು ಹಸುಳೆಗೆ ಜೀವನಾಡಿ..





Sunday, 23 August 2015

ಮಾನಸ ಮನಸ್ಸಿನ ಮನೋಗತ...

ನನ್ನ ಹೃದಯದಲಿ ಚಿಮ್ಮಿತು ಅಲೆಗಳ ತರಂಗ
ನಿನ್ನ ಕಂಡು ನಿನಾದದಲಿ ನಾಚಿ ನಿಂತಿತು ಪತಂಗ
ಸುಯೋಗದಿ ಬಯಸಿ ಬಂದಿರುವೆ ನಿನ್ನ ಸಂಗ
ನಿನ್ನಿಂದ ಆಗದಿರಲಿ ಈ ಸುಂದರ ಪ್ರೇಮಭಂಗ..

--
ಬಲು ಅಂದ ಆ ನಿನ್ನ ಕೇಶ ವಿನ್ಯಾಸದ ಪರಿ
ಮೋಡಿ ಮಾಡಿತು ನವಿರಾದ ಸುಕೇಶಿ ಗರಿ
ಓ ಕುವರಿ, ಬೆಳ್ಳಿ ಬಣ್ಣದ ಚೆಲುವಿನ ನಾರಿ..
ಪ್ರೀತಿ ಬೆಸೆದ ನನ್ನ ಹೃದಯವೇ ನಿನಗೆ ಸರಿ
--

ಎದುರಿಸಲು ತಯಾರು ಪ್ರೀತಿಗಾಗಿ ಪರೀಕ್ಷೆ
ಧೈರ್ಯದಿ ನಿನಗೆ ಕೇಳುತಿರುವೆ ಪ್ರೇಮಭಿಕ್ಷೆ
ನಿನ್ನ ಮೇಲೆ ನಾ ಇಟ್ಟಿರುವೆ ಅಪಾರ ನಿರೀಕ್ಷೆ
ನಮ್ಮ ಮೇಲಿದೆ ದೇವ ಶ್ರೀಹರಿಯ ಶ್ರೀರಕ್ಷೆ
--

ನಮ್ಮಿಬ್ಬರ ನಡುವೆ ಸಂಪ್ರೀತಿಯ ಸಂಕೋಲೆ
ನಾ ನಿನಗೆ ಕಳಿಸಿದೆ ಪ್ರೇಮಪತ್ರದ ಸುತ್ತೋಲೆ
ಪ್ರೀತಿಗಾಗಿ ನಾ ನೀಡುವೆ ನಿನಗೆ ಕಿವಿಯೋಲೆ
ಕಿವಿಯೋಲೆ ತೊಟ್ಟು ಆಡುವೆಯಾ ಉಯ್ಯಾಲೆ




Friday, 21 August 2015

ಬಡಜೀವಿಗೆ ಬರೆ ಮೇಲೆ ಬರೆ...

ಬರ ಬಂದಿದೆ ಭುವಿಗೆ ಬರ ಬಂದಿದೆ
ನೋವಿದೆ ರೈತನ ಮನೆಯಲ್ಲಿ ಸಾವಿದೆ
ಬರ ಬಂದು ಬರಡು ಬರಡಾಗಿದೆ ಭೂಮಿ
ಭೂಮಿ ನೋಡುತ ಕುಳಿತವನೇ ಸ್ವಾಮಿ
--
ಮಳೆ ಬಂದಿಲ್ಲ, ಮಳೆ ಇಲ್ಲದೆ ಬೆಳೆ ಬರಲ್ಲ
ನೆಲೆಯಿಲ್ಲ, ರೈತನ ಜೀವಕೆ ಬೆಲೆಯಿಲ್ಲ..
ಕಾಲಲ್ಲಿನ ಚಪ್ಪಲಿಗಳು ಎಸಿ ರೂಮ್ನಲಿ
ತರಕಾರಿ-ಹಣ್ಣುಗಳು ಮಾರಿದ್ರು ಬೀದೀಲಿ
--
ಬಾನಂಗಳದಿ ಸುರಿಯಲಿಲ್ಲ ಮಳೆರಾಯ
ಮಳೆರಾಯನಿಲ್ಲದೆ ಬರಲಿಲ್ಲ ಬೆಳೆರಾಯ
ಕಂಗಾಲಾದ ಬೇಸಾಯದ ಮಾರಾಯ
ಬರೀ ವ್ಯವಸಾಯ ಮಾಡಿ ನೀ ಸಾಯ..
--
ಉತ್ತರ ಕರ್ನಾಟಕದಲ್ಲಿ ಜನರು ತತ್ತರ
ಸಾಲಸೋಲ ಮಾಡಿ ಹರಿಯಿತು ನೆತ್ತರ
ಪತ್ರಿಕೆಗಳಲ್ಲಿ ಆಯ್ತು ವರದಿಗಳ ಬಿತ್ತರ
ಯಾರಿಂದಲೂ ಸಿಗುತ್ತಿಲ್ಲ ರೈತನಿಗೆ ಉತ್ತರ





Thursday, 20 August 2015

1.65 ಲಕ್ಷ ಕೋಟಿ ಪ್ಯಾಕೇಜ್ ಬಿಹಾರಕ್ಕೆ ಮಾತ್ರ ಸಾಕೇ?

ಬಿಹಾರ ರಾಜ್ಯವನ್ನ ಅಭಿವೃದ್ಧಿಪಡಿಸುವುದಕ್ಕೋಸ್ಕರ 1.65 ಲಕ್ಷ ಕೋಟಿಯಷ್ಟು ವಿಶೇಷ ಪ್ಯಾಕೇಜನ್ನು ಪ್ರಧಾನಿಯವರು ಘೋಷಣೆ ಮಾಡಿದ್ದಾರೆ.
ದೇಶದ ಪ್ರತಿಯೊಂದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು, ಕೇಂದ್ರದ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸುವುದು ಪ್ರಧಾನಿಯವರ ಶಕ್ತಿ, ಸಾಮರ್ಥ್ಯಗಳನ್ನು ತೋರಿಸುತ್ತದೆ.
ಒಂದು ಕಡೆ ನೋಡಿದರೆ ಪ್ರಧಾನಿಯವರು ಕರ್ನಾಟಕ ರಾಜ್ಯವನ್ನು ಕಡೆಗಣಿಸಿದ್ದಾರಾ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೆಳಿ ಬರುತ್ತಿದೆ.
--
ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಸಾಲದ ಸುಳಿಗೆ ಸಿಲುಕಿ ದೇಶದ ಬೆನ್ನೆಲುಬಾಗಿರುವ ರೈತ ವಿವಿಧ ರೀತಿಯ ಸಾವಿನಲ್ಲಿ ಅಂತ್ಯ ಕಂಡುಕೊಳ್ಳುತ್ತಿದ್ದಾನೆ.
ಪ್ರಧಾನಿಯವರಿಗೆ ಈ ವಿಷಯ ತಿಳಿದೇ ಇರುತ್ತದೆ.. ರೈತನ ಆತ್ಮಹತ್ಯೆಯ ಪ್ರಕರಣಗಳನ್ನು ತಡೆಗಟ್ಟುವ ಕ್ರಮಗಳು, ಯೋಜನೆಗಳು ರೂಪಿತ ಆಗುತ್ತಿಲ್ಲ, ಕೇಂದ್ರದ ವಿಶೇಷ ಅನುದಾನ ರೈತರಿಗೆ ದೊರಕುತ್ತಿಲ್ಲ ಎನ್ನುವುದು ಜನರಿಗೆ ಬೇಸರ ತಂದಿದೆ.
--
ಸಂಸದ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಲೋಕಸಭೆ ಕಲಾಪದಲ್ಲಿ ರೈತರ ಪರ ದನಿ ಎತ್ತಿ, ಕನ್ನಡದಲ್ಲಿ ಮಾತನಾಡಿ ರೈತರ ಸಮಸ್ಯೆಗಳು, ಸಾವಿನ ಹಿನ್ನೆಲೆಗಳನ್ನು ಕಲಾಪದ ಮುಂದಿಟ್ಟು, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಕೇಂದ್ರದ ಕೃಷಿ ಸಚಿವರಾದ ಮಾನ್ಯ ರಾಧಾಮೋಹನ್ ಸಿಂಗ್ ನೈತಿಕತೆ ಮರೆತು ನೇಗಿಲ ಯೋಗಿಯ ಸಾವಿನ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದು, ದೇಶದ ಅನ್ನದಾತನಿಗೆ ಮಾಡಿದ ಅಪಮಾನ.
--
ಮೊನ್ನೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ‘ರಾಜ್ಯದ ಅಭಿವೃದ್ಧಿಗಾಗಿ ನಾನು ಯಾರನ್ನಾದರೂ ಸರಿ ಭಿಕ್ಷೆ ಬೇಡುವುದಕ್ಕೆ ಹಿಂಜರಿಯುವುದಿಲ್ಲ’ ಎಂದರು.
ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಸಂಸದರಾಗಲಿ ರೈತರಿಗಾಗಿ ಯೋಜನೆ ರೂಪಿಸಿದರೂ ಅದು ರೈತರಿಗೆ ತಲುಪುತ್ತಿಲ್ಲ, ಅದೇ ರೀತಿ ಕೇಂದ್ರದ ವಿಶೇಷ ಪ್ಯಾಕೇಜ್ ಗಳನ್ನು ತರುವಲ್ಲಿ ವಿಫಲರಾಗುತ್ತಿದ್ದಾರೆ.
--
ಪ್ರಧಾನಿಯವರು ಬರೀ ಒಂದೇ ರಾಜ್ಯಕ್ಕೆ ಭಾರೀ ಮೊತ್ತದ ವಿಶೇಷ ಪ್ಯಾಕೇಜ್ ನೀಡುವ ಯೋಜನಗೆ ಮುಂದಾಗಿದ್ದಾರೆ, ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಭಾರೀ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ, ಇದು ಅಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ರೂಪಿಸಿರುವ ತಂತ್ರವಾ? ಎಂಬುದು ಪ್ರಜೆಗಳ ಪ್ರಶ್ನೆ.
--
ರಾಜ್ಯದ ಮುಖ್ಯಮಂತ್ರಿ, ಸಚಿವರಿಗೆ ಕಿಂಚಿತ್ತು ನೈತಿಕತೆ ಇದೆಯಾ? ಸತ್ತ ರೈತನ ಮನೆಗೆ ಭೇಟಿ ನೀಡಿ ಅಷ್ಟೋ ಇಷ್ಟೋ ಹಣ ಕೊಟ್ಟು ‘ಕೈ’ ತೊಳೆದುಕೊಳ್ಳುತ್ತಿದ್ದಾರಲ್ಲ..
ಬರೀ ಮನ್ ಕೀ ಬಾತ್ ನಲ್ಲಿ ಮಾತನಾಡಿದರೆ... ‘ರೈತರೇ ನೀವು ಸಾಯಲು ಹೋಗಬೇಡಿ, ನಿಮ್ಮ ಬಂಗಾರದ ಭವಿಷ್ಯ ನಮ್ಮ ಕೈಯಲ್ಲಿದೆ, ಅದನ್ನು ಹಾಳು ಮಾಡುವುದು ಹೇಗೆ ಎಂಬುದು ನಮಗೆ ಗೊತ್ತು ಎಂಬಂತಿದೆ ಇವರ ಮನ್ ಕೀ ಬಾತ್..
--
ದೇಶದ ಪ್ರಧಾನಿಯವರು ಮಲತಾಯಿ ಧೋರಣೆ ತೋರಿಸುವುದು ಶೋಭೆಯಲ್ಲ.. ದೇಶದ ಪ್ರತಿಯೊಂದು ರಾಜ್ಯ, ಜಿಲ್ಲೆ , ತಾಲೂಕುಗಳು ಅವರ ವ್ಯಾಪ್ತಿಗೆ ಬರುತ್ತವೆ.
ಅಭಿವೃದ್ಧಿ ಹೊಂದಿರುವ ಪ್ರದೇಶಗಳನ್ನೇ ಅಭಿವೃದ್ಧಿ ಮಾಡುತ್ತಾ ಹೋದರೆ, ಅಭಿವೃದ್ಧಿ ಕಾಣದೆ ಹಿಂದೆಯೇ ಇರುವ ರಾಜ್ಯ, ಜಿಲ್ಲೆ, ಹಳ್ಳಿಗಳು ಹಿಂದೆಯೇ ಉಳಿಯುತ್ತಿವೆ.
ಅವುಗಳನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕೆಲಸ ಆಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.





Wednesday, 19 August 2015

ಮಲ್ಲಿಗೆ ನೀ ಮಾತಾಡಿದಾಗ...

ಓ ಮುಗಿಲ ಮಲ್ಲಿಗೆ, ಸಪ್ತಲೆಯ ಸಂಪಿಗೆ
ಕಸ್ತೂರಿ ಸುವಾಸನೆಯ ಸಂಜೆಮಲ್ಲಿಗೆ..
ಏಳು ಸುತ್ತಿನ ಕೋಟೆ ಸುತ್ತಿ ಬಂದೆ ನಿನ್ನಲ್ಲಿಗೆ
ನೀ ನಡೆವ ಹಾದೀಲಿ ಚೆಲ್ಲುವೆ ನಾ ಮಲ್ಲಿಗೆ
--
ಸ್ವರ್ಗ ಸುರಲೋಕದ ಸುಂದರ ಕಲಾಸುರಭಿ
ಓಂಕಾರ ನಾದದಿ ಝೇಂಕರಿಸಿತು ದುಂದುಭಿ
ಹಂಬಲಿಸಿ ಹೂಗಳ ಅರಸಿ ಹೊರಟ ದುಂಬಿ
ಮರೆಯಲಾರದೆ ನಾ ಹಾಡುವೆ ಮನದುಂಬಿ
---
ವಸಂತಪ್ರಿಯನ ವಸಂತಕಾಲದ ವಸಂತದೂತಿ
ಮಮಕಾರ ತೋರಿ ಮನ್ವಂತರ ಸೃಷ್ಟಿಸಿದ ಕಾಂತಿ
ಮನವ ಕದ್ದು ಓಡಿದ ಮಾರು ವೇಷದ ವಾಸಂತಿ
ಓ ಕಾಂತಿ, ನೀನಿದ್ದರೆ ನನ್ನ ಬಾಳಲ್ಲಿ ಸುಖಶಾಂತಿ




Tuesday, 18 August 2015

ಕಣ್ಮರೆಯಾದ ಕಾಂತಿಯ ಕಿರಣ...

ಹೊಂಚು ಹಾಕಿ ಮಿಂಚಿ ಮರೆಯಾದ ಬೆಳಕು
ಬೆಳಕ ಹುಡುಕಲು ಹೊರಟ ನನಗೆ ಅಳುಕು
ಒನಪು ಒಯ್ಯಾರದಿ ಹೊಯ್ದಾಡಿತು ಥಳುಕು
--
ನನ್ನಲ್ಲಿ ತನ್ಮಯ ತಂದಿತು ಬೆಳಕಿನ ವಿಸ್ಮಯ
ಚರ್ಯೆ ಕಂಡು ಬೆರಗಾಯ್ತು ಈ ಹೃದಯ
ನಲಿದ ಬೆಳಕಲ್ಲಿ ನುಲಿದ ಸ್ನೇಹದ ಉದಯ
--
ಕಗ್ಗತ್ತಲ ಕಾನನದಲ್ಲಿ ಕಂಡಿರುವೆ ನಾ ಕಾಂತಿ
ತಾತ್ಸಾರದಿ ತಾಪವಾಗಿ ನನಗೆ ತಳ್ಳಿತು ತಂತಿ
ಸುತ್ತುಗಳ ಸುತ್ತಿ ಬಂದೆನು ಹುಡುಕುತ ಶಾಂತಿ
--
ಕಾಂತಿಯ ಕಿರಣದಲ್ಲಿ ಕಾಮನಬಿಲ್ಲಿನ ಮೊರೆತ
ನನ್ನ ಕಂಡು ಬೆಳಕು ಮರೆಯಾಗಿ ಮೆರೆಯಿತಾ?
ಮರೆಯಾದ ಬೆಳಕ ಕಾಣಲು ಮನದಲ್ಲಿ ತುಡಿತ




Friday, 14 August 2015

ಪ್ರಜ್ವಲಿಸಲಿ ಭಾರತಾಂಬೆಯ ಜ್ಯೋತಿ..

ಬಂತು ಸ್ವಾತಂತ್ರ್ಯ ದಿನ.. ಭಾರತಾಂಬೆಯ ಜನ್ಮದಿನ
ಸ್ವತಂತ್ರಕ್ಕಾಗಿ ತ್ಯಾಗ ಮಾಡಿತು ವೀರರ ತನುಮನ
ದಾಸ್ಯದಿಂದ ಮುಕ್ತಿಗೊಳಿಸಿದ ಯೋಧರಿಗೆ ನಮನ
--
ಸರ್ವಸ್ವತಂತ್ರದ ಸಾಕಾರಕ್ಕಾಗಿ ಸರ್ವತಂತ್ರದ ಪಣ
ಪಣ ತೊಟ್ಟು ಶೌರ್ಯ ಮೆರೆಯಿತು ವೀರರ ಗುಣ
ಕಣದಲ್ಲಿ ಕಾದಾಡಿ ಸಿಡಿಲ ಸಿಂಹಗಳ ನೆತ್ತರ ಅರ್ಪಣ
--
ಕ್ರಾಂತಿಯ ಕಾರ್ಮೋಡ ಕವಿದು ಶಾಂತಿಯ ಚಿತ್ರಣ
ಮಂಡಲದಿ ಮನುಕುಲಕ್ಕೆ ಬೆಳಗಿತು ಮೋಕ್ಷದ ದರ್ಪಣ
ಮಾಡೋಣ ಯುದ್ಧದಿ ಘರ್ಜಿಸಿ ಹೋರಾಡಿದವರ ಪಠಣ
--
ನಿರಂಕುಶ ಅಳಿದೋಯ್ತು, ಅಂಕುಶ ಹಿಡಿದಾಯ್ತು
ನಾವೇ ಭಾಗ್ಯವಂತರು ನಮ್ಮ ಸ್ವಚ್ಛಂದ ನಾಡಿನಲ್ಲಿ..
ಸ್ವೋಪಜ್ಞತೆ ಶಕ್ತಿ ಬೆಳಗಿ ಜಗಮಗಿಸಲಿ ನಾಡ ಜನರಲ್ಲಿ..




Monday, 10 August 2015

ಈ ಸಾವು ನ್ಯಾಯವೇ..?

ಸಾಲದ ಶೂಲಕ್ಕೆ ಸಿಕ್ಕಿ ನರಳಿದೆ ರೈತನ ಸಾವು
ನೇಗಿಲ ಯೋಗಿಯ ಸಾವು ತಂದಿದೆ ನೋವು
ಎಲ್ಲರ ಮನೆಗೂ ಬೇಕು ಘಮಘಮ ಹೂವು
ಅನ್ನ ನೀಡುವಾತನ ಬಾಳಲ್ಲಿ ಬರೀ ಕಹಿ-ಬೇವು
--
ಕೋಟಿ ಕೋಟಿ ಜನರಿಗೆ ನೀಡಿದೆ ನೀನು ಅನ್ನ
ಹೊಗಳಿ ಹೊನ್ನಶೂಲಕ್ಕೇರಿಸಿದರು ರೈತ ನಿನ್ನ
ನಿನ್ನ ಮನೆಗೆ ಹಾಕುತಿಹರು ಇಲ್ಲಿ ಎಲ್ಲರೂ ಕನ್ನ
ಯಾರು ಕಾಪಾಡುತ್ತಿಲ್ಲ ಓ ಕಾಯಕಯೋಗಿ ನಿನ್ನ
--
ಉಳುವಾ ಯೋಗಿ.. ಬಿತ್ತುವುದಾ ಬಿಡುವವನಲ್ಲ..
ಬಿತ್ತುವುದಾ ಬಿಟ್ಟರೆ ಯಾರಿಗೂ ಉಳಿಗಾಲವಿಲ್ಲ
ಯೋಗಿ.. ಸೃಷ್ಟಿ ನಿಯಮಕೆ ನೀನಾಗಿರುವೆ ಭೋಗಿ..
ಈ ಲೋಕ ಮರೆತು ಹೊರಟು ನಿಂತಿಹೆ ನೀ ಸಾಗಿ
--
ಮನುಕುಲ ಮಾಡಿಕೊಂಡಿದೆ ನಿನ್ನ ತಲೆಗೆ ತಲೆದಿಂಬು
ಮಲಗಿ ಮಲಗಿ ಎಲ್ಲರ ಹೃದಯ ಆಗಿದೆ ಮಬ್ಬು
ಇಲ್ಲಿ ಮುರಿದು ಹೋಗ್ತಿದೆ ದೇಶದ ಬೆನ್ನೆಲುಬು
ಬೆಂಬಲವಾಗಿ ನಿಲ್ಲಲು ಇಲ್ಲವೇ ಯಾವ ಸೆಣಬು..?




Sunday, 2 August 2015

ಸ್ನೇಹದ ಬಂಧ...

ವಿಶ್ವ ಸ್ನೇಹಿತರ ದಿನದ ಸಂಪ್ರದಾಯ
ಪರಸ್ಪರ ಶುಭಾಶಯಗಳ ವಿನಿಮಯ
ಸ್ನೇಹಿತರೊಂದಿಗೆ ಕಳೆಯಿರಿ ಸಮಯ
ಮನಸ್ಸು ಅರಳಿದಾಗ ಎಲ್ಲ ಸ್ನೇಹಮಯ
--
ಆಪತ್ಕಾಲದಲ್ಲಿ ಆಪತ್ಬಾಂಧವನ ಅವತಾರ
ಅಂತರಂಗದ ಸೌಹಾರ್ದಕ್ಕಾಗಿ ಸಾಕಾರ
ಪವಿತ್ರ ಸ್ನೇಹದಲ್ಲಿ ಅಪಾರ ಮಮಕಾರ
ನಯನ ಮನೋಹರ ನಿಷ್ಕಲ್ಮಶ ನಿರ್ವಿಕಾರ
--
ನೋವಲ್ಲಿ ನೊಂದವರಿಗೆ ದಿವ್ಯ ಚೇತನ
ಜೀವಕ್ಕೆ ಜೀವಾಳ ಆಪ್ತನ ಈ ಗೆಳೆತನ
ಕತ್ತಲ ದಾರಿ ಹಿಡಿದವರಿಗೆ ಬೆಳಕಿನ ಕಿರಣ
ಜೀವನಕ್ಕೆ ದಾರಿದೀಪ ಪ್ರಜ್ವಲ ಪ್ರತಿಭಾನ




Monday, 13 July 2015

ನಲ್ಲೆಗೆ ನಲ್ಮೆಯ ಕಾಣಿಕೆ...

ನಾ ಹಾಕುವೆ ನಿನಗೆ ಪ್ರೇಮದುಂಗುರ
ನೀಡುವೆಯಾ ನನಗೆ ಒಲವಿನುಂಗುರ
ನಲ್ಲೆಗಾಗಿ ನಾಜೂಕಾದ ಚಿನ್ನದುಂಗುರ
ಆಗ ನಿನ್ನ ಮನಸು ಬಲು ಸುಮಧುರ
--
ನುಣುಪಾದ ನಿನ್ನ ಕೈ ಸೇರಲು ಉಂಗುರ
ಮನದ ಮಾತು ಬಿಚ್ಚಿಡು ನೀ ಮಧುರ
ಅರಳಿದ ಮಲ್ಲಿಗೆ ನೀ ನೋಡಲು ಸುಂದರ
ಮನದಲ್ಲಿ ಮೂಡಿರಲಿ ಚೆಲುವು ಚಿತ್ತಾರ
--
ಪ್ರಖರ ಸೂರ್ಯರಶ್ಮಿ ಕಿರಣಗಳ ವಯ್ಯಾರ
ಕಿರಣಗಳ ರಶ್ಮಿಗೆ ಹೂರಾಶಿ ಅರಳಿತು ಸರಸರ
ಇಮ್ಮಡಿಸಿ ಹೂಗಳ ಸೌಂದರ್ಯ ಮಿರಮಿರ
ನಲ್ಲೆ, ನೀ ನೋಡು ಹೂಗಳ ಸಂಭ್ರಮದ ಸಾರ
--
ಮಾಡಲು ಸದಾ ಸಿದ್ಧ ಪ್ರೀತಿಗಾಗಿ ನಾ ಸಮರ
ಸಮರ ಸಾಧಿಸಿ ತೋರಿಸುವೆ ಪ್ರೇಮ ಅಮರ
ಅಮರ ಪ್ರೇಮದ ಕಥೆ ಹೇಳಿತು ಮಾಮರ
ಕೋಗಿಲೆ ಹಾಡಿ ಸಾರಿತು ಪ್ರೀತಿ ಅಜರಾಮರ




Friday, 3 July 2015

ಸಂಪ್ರೀತಿಯ ಸುಳಿಯಲ್ಲಿ...

ಸುಂದರ ಸುಲಲಿತೆ, ಹಂದರದ ಲತೆ
ನಿಸರ್ಗದಿ ನಳನಳಿಸುವ ತರುಲತೆ
ಮಂಜುಳ ಮಧುರ ಕಂಠದ ವನಿತೆ
ನಾ ಆರಾಧಿಸುವ ಹೃದಯ ದೇವತೆ
--
ಸಾಗರದಾಳದಲ್ಲಿ ಸುಳಿದಿದೆ ಸೆಳವು
ಜುಳುಜುಳು ನೀರಿನಲ್ಲಿ ನಿನ್ನ ಸುಳಿವು
ನೀರಲ್ಲಿ ಕಾಣ್ತಿದೆ ಆ ನಿನ್ನ ನಲಿವು
ತಿಳಿಸು ನನಗೆ ಪ್ರೇಮದ ನಿಲುವು
--
ಓ ನಲ್ಲೆ, ನೀನಲ್ಲ ಅಂತಿಂಥ ಹೆಣ್ಣು
ಬಲು ಸುಂದರ ಆ ನಿನ್ನ ಕಣ್ಣು
ನೀ ನಕ್ಕರೆ ಸಿಕ್ಕಿತು ನನಗೆ ಹೊನ್ನು
ನೀ ನಗದಿದ್ದರೆ ನಾ ಮಣ್ಣಲ್ಲಿ ಮಣ್ಣು
--
ಸಂಪ್ರೀತಿ ಸುಳಿಗೆ ನಿನ್ನ ನಗುವೆ ಕನ್ನಡಿ
ನೀ ಹೇಳು ನನಗೆ ಒಲವಿನ ನಾಣ್ನುಡಿ
ಮೆಲ್ಲಗೆ ಮಾತನಾಡು ನೀ ಮೆಲ್ನುಡಿ
ಬರೆಯುವೆಯಾ ಪ್ರೀತಿಗೆ ಮುನ್ನುಡಿ





Wednesday, 10 June 2015

ಮಂದಹಾಸದ ಮದನಾರಿ...


ಅವಳು ಉಸಿರು ಉಸಿರಲ್ಲೂ ಬೆರೆತಿರುವಳು
ಹಸಿರ ಹಸಿರಲ್ಲೂ ಅವಳಿರುವಳು
ನನ್ನವಳು ಮೆಲ್ಲನೆ ನಗುವವಳು
ಮೊಗದಲ್ಲಿ ಮಂದಹಾಸ ಬೀರುವವಳು
--
ಗಡಿಬಿಡಿಯಲ್ಲಿ ನನಗೆ ಮಾಡುವಳು ಗಂಜಿ
ಗಂಜಿ ಕುಡಿಯುವೆ ನನ್ನವಳಿಗೆ ಅಂಜಿ
ಗಲ್ಲದ ಮೇಲೆ ಗುಳಿಕೆನ್ನೆ ಗುಲಗಂಜಿ
ಗುಣದಲ್ಲಿ ಗೆಲ್ಲುವಳು ನನ್ನ ಪುಟ್ನಂಜಿ
--
ನಗು ನಗುತಾ ಸಾಗಿಸುವಳು ಬದುಕು
ಬದುಕಲ್ಲಿ ಬರುವುದಿಲ್ಲ ಯಾವುದೇ ತೊಡಕು
ನನ್ನವಳು ನನ್ನೆದುರಿಗಿದ್ದರೆ ನನಗಷ್ಟೇ ಸಾಕು
ನನಗೆ ಜೀವನಪೂರ್ತಿ ಅವಳದೇ ಮೆಲುಕು
--
ಅವಳು ನಕ್ಕರೆ ಹಾಲು-ಜೇನು ಸಕ್ಕರೆ
ನಗು ಚೆಲ್ಲಿದರೆ ಹರಿಯಿತು ಜಲಧಾರೆ
ನಗುವಿನಲ್ಲೇ ಉಣಬಡಿಸುವಳು ನನ್ನ ನೀರೆ
ಪ್ರತಿಜನ್ಮದಲ್ಲೂ ನೀನೆ ಸಖಿಯಾಗಿ ಬಾರೇ




Tuesday, 2 June 2015

ಅಭಿಮಾನದ ಅಲೆಯಲ್ಲಿ...

ನನ್ನ ಗೆಳತಿಗೆ ನಾ ಅಭಿಮಾನಿ
ಅವಳು ತುಂಬಾ ಸ್ವಾಭಿಮಾನಿ
ಎದೆ ಆಳೋ ದೊರೆಸಾಲಿನಿ
ಮಿಡಿಯುತಿದೆ ಸದಾ ನನ್ನ ದನಿ
--
ನೆನಪಿನ ಅಲೆಯಲ್ಲಿ ನಾ ತೇಲಿ
ಹೃದಯದ ಸುತ್ತ ಹಾಕಿದ್ಲು ಬೇಲಿ
ಅವಳಿಗೆ ಹಾಡುತ್ತ ಕುಳಿತೆ ನಾ ಲಾಲಿ
ಸಿಹಿ ನಿದ್ರೆಗೆ ಜಾರಿದ್ಲು ಸುವ್ವಾಲಿ
--
ವರ್ಷಧಾರೆ ಇಳೆಗೆ ಜಾರಿತು ಹನಿಹನಿ
ಧರೆಗೆ ಬಂದು ಕರಗಿತು ಇಬ್ಬನಿ
ನನ್ನವಳು ಭುವಿಗೆ ಬಂದಿಳಿದ ಅಶ್ವಿನಿ
ಕ್ಷಣ ಕಾಣದಿದ್ದರೆ ಇಳಿಯಿತು ಕಂಬನಿ
--
ಹನಿ ರೂಪದಲ್ಲಾಯ್ತು ವರುಣ ಸಿಂಚನ
ಅನುರಾಗದ ಅಲೆಯಲ್ಲಿ ತೇಲಿತು ಮನ
ಅವಳಿಂದ ಸಿಗುವುದೇ ನನಗೆ ಸ್ಪಂದನ
ಅವಳಿಗಾಗಿ ನಾ ಕಾದಿರುವೆ ಪ್ರತಿದಿನ