Wednesday, 19 August 2015

ಮಲ್ಲಿಗೆ ನೀ ಮಾತಾಡಿದಾಗ...

ಓ ಮುಗಿಲ ಮಲ್ಲಿಗೆ, ಸಪ್ತಲೆಯ ಸಂಪಿಗೆ
ಕಸ್ತೂರಿ ಸುವಾಸನೆಯ ಸಂಜೆಮಲ್ಲಿಗೆ..
ಏಳು ಸುತ್ತಿನ ಕೋಟೆ ಸುತ್ತಿ ಬಂದೆ ನಿನ್ನಲ್ಲಿಗೆ
ನೀ ನಡೆವ ಹಾದೀಲಿ ಚೆಲ್ಲುವೆ ನಾ ಮಲ್ಲಿಗೆ
--
ಸ್ವರ್ಗ ಸುರಲೋಕದ ಸುಂದರ ಕಲಾಸುರಭಿ
ಓಂಕಾರ ನಾದದಿ ಝೇಂಕರಿಸಿತು ದುಂದುಭಿ
ಹಂಬಲಿಸಿ ಹೂಗಳ ಅರಸಿ ಹೊರಟ ದುಂಬಿ
ಮರೆಯಲಾರದೆ ನಾ ಹಾಡುವೆ ಮನದುಂಬಿ
---
ವಸಂತಪ್ರಿಯನ ವಸಂತಕಾಲದ ವಸಂತದೂತಿ
ಮಮಕಾರ ತೋರಿ ಮನ್ವಂತರ ಸೃಷ್ಟಿಸಿದ ಕಾಂತಿ
ಮನವ ಕದ್ದು ಓಡಿದ ಮಾರು ವೇಷದ ವಾಸಂತಿ
ಓ ಕಾಂತಿ, ನೀನಿದ್ದರೆ ನನ್ನ ಬಾಳಲ್ಲಿ ಸುಖಶಾಂತಿ




Tuesday, 18 August 2015

ಕಣ್ಮರೆಯಾದ ಕಾಂತಿಯ ಕಿರಣ...

ಹೊಂಚು ಹಾಕಿ ಮಿಂಚಿ ಮರೆಯಾದ ಬೆಳಕು
ಬೆಳಕ ಹುಡುಕಲು ಹೊರಟ ನನಗೆ ಅಳುಕು
ಒನಪು ಒಯ್ಯಾರದಿ ಹೊಯ್ದಾಡಿತು ಥಳುಕು
--
ನನ್ನಲ್ಲಿ ತನ್ಮಯ ತಂದಿತು ಬೆಳಕಿನ ವಿಸ್ಮಯ
ಚರ್ಯೆ ಕಂಡು ಬೆರಗಾಯ್ತು ಈ ಹೃದಯ
ನಲಿದ ಬೆಳಕಲ್ಲಿ ನುಲಿದ ಸ್ನೇಹದ ಉದಯ
--
ಕಗ್ಗತ್ತಲ ಕಾನನದಲ್ಲಿ ಕಂಡಿರುವೆ ನಾ ಕಾಂತಿ
ತಾತ್ಸಾರದಿ ತಾಪವಾಗಿ ನನಗೆ ತಳ್ಳಿತು ತಂತಿ
ಸುತ್ತುಗಳ ಸುತ್ತಿ ಬಂದೆನು ಹುಡುಕುತ ಶಾಂತಿ
--
ಕಾಂತಿಯ ಕಿರಣದಲ್ಲಿ ಕಾಮನಬಿಲ್ಲಿನ ಮೊರೆತ
ನನ್ನ ಕಂಡು ಬೆಳಕು ಮರೆಯಾಗಿ ಮೆರೆಯಿತಾ?
ಮರೆಯಾದ ಬೆಳಕ ಕಾಣಲು ಮನದಲ್ಲಿ ತುಡಿತ




Friday, 14 August 2015

ಪ್ರಜ್ವಲಿಸಲಿ ಭಾರತಾಂಬೆಯ ಜ್ಯೋತಿ..

ಬಂತು ಸ್ವಾತಂತ್ರ್ಯ ದಿನ.. ಭಾರತಾಂಬೆಯ ಜನ್ಮದಿನ
ಸ್ವತಂತ್ರಕ್ಕಾಗಿ ತ್ಯಾಗ ಮಾಡಿತು ವೀರರ ತನುಮನ
ದಾಸ್ಯದಿಂದ ಮುಕ್ತಿಗೊಳಿಸಿದ ಯೋಧರಿಗೆ ನಮನ
--
ಸರ್ವಸ್ವತಂತ್ರದ ಸಾಕಾರಕ್ಕಾಗಿ ಸರ್ವತಂತ್ರದ ಪಣ
ಪಣ ತೊಟ್ಟು ಶೌರ್ಯ ಮೆರೆಯಿತು ವೀರರ ಗುಣ
ಕಣದಲ್ಲಿ ಕಾದಾಡಿ ಸಿಡಿಲ ಸಿಂಹಗಳ ನೆತ್ತರ ಅರ್ಪಣ
--
ಕ್ರಾಂತಿಯ ಕಾರ್ಮೋಡ ಕವಿದು ಶಾಂತಿಯ ಚಿತ್ರಣ
ಮಂಡಲದಿ ಮನುಕುಲಕ್ಕೆ ಬೆಳಗಿತು ಮೋಕ್ಷದ ದರ್ಪಣ
ಮಾಡೋಣ ಯುದ್ಧದಿ ಘರ್ಜಿಸಿ ಹೋರಾಡಿದವರ ಪಠಣ
--
ನಿರಂಕುಶ ಅಳಿದೋಯ್ತು, ಅಂಕುಶ ಹಿಡಿದಾಯ್ತು
ನಾವೇ ಭಾಗ್ಯವಂತರು ನಮ್ಮ ಸ್ವಚ್ಛಂದ ನಾಡಿನಲ್ಲಿ..
ಸ್ವೋಪಜ್ಞತೆ ಶಕ್ತಿ ಬೆಳಗಿ ಜಗಮಗಿಸಲಿ ನಾಡ ಜನರಲ್ಲಿ..




Monday, 10 August 2015

ಈ ಸಾವು ನ್ಯಾಯವೇ..?

ಸಾಲದ ಶೂಲಕ್ಕೆ ಸಿಕ್ಕಿ ನರಳಿದೆ ರೈತನ ಸಾವು
ನೇಗಿಲ ಯೋಗಿಯ ಸಾವು ತಂದಿದೆ ನೋವು
ಎಲ್ಲರ ಮನೆಗೂ ಬೇಕು ಘಮಘಮ ಹೂವು
ಅನ್ನ ನೀಡುವಾತನ ಬಾಳಲ್ಲಿ ಬರೀ ಕಹಿ-ಬೇವು
--
ಕೋಟಿ ಕೋಟಿ ಜನರಿಗೆ ನೀಡಿದೆ ನೀನು ಅನ್ನ
ಹೊಗಳಿ ಹೊನ್ನಶೂಲಕ್ಕೇರಿಸಿದರು ರೈತ ನಿನ್ನ
ನಿನ್ನ ಮನೆಗೆ ಹಾಕುತಿಹರು ಇಲ್ಲಿ ಎಲ್ಲರೂ ಕನ್ನ
ಯಾರು ಕಾಪಾಡುತ್ತಿಲ್ಲ ಓ ಕಾಯಕಯೋಗಿ ನಿನ್ನ
--
ಉಳುವಾ ಯೋಗಿ.. ಬಿತ್ತುವುದಾ ಬಿಡುವವನಲ್ಲ..
ಬಿತ್ತುವುದಾ ಬಿಟ್ಟರೆ ಯಾರಿಗೂ ಉಳಿಗಾಲವಿಲ್ಲ
ಯೋಗಿ.. ಸೃಷ್ಟಿ ನಿಯಮಕೆ ನೀನಾಗಿರುವೆ ಭೋಗಿ..
ಈ ಲೋಕ ಮರೆತು ಹೊರಟು ನಿಂತಿಹೆ ನೀ ಸಾಗಿ
--
ಮನುಕುಲ ಮಾಡಿಕೊಂಡಿದೆ ನಿನ್ನ ತಲೆಗೆ ತಲೆದಿಂಬು
ಮಲಗಿ ಮಲಗಿ ಎಲ್ಲರ ಹೃದಯ ಆಗಿದೆ ಮಬ್ಬು
ಇಲ್ಲಿ ಮುರಿದು ಹೋಗ್ತಿದೆ ದೇಶದ ಬೆನ್ನೆಲುಬು
ಬೆಂಬಲವಾಗಿ ನಿಲ್ಲಲು ಇಲ್ಲವೇ ಯಾವ ಸೆಣಬು..?




Sunday, 2 August 2015

ಸ್ನೇಹದ ಬಂಧ...

ವಿಶ್ವ ಸ್ನೇಹಿತರ ದಿನದ ಸಂಪ್ರದಾಯ
ಪರಸ್ಪರ ಶುಭಾಶಯಗಳ ವಿನಿಮಯ
ಸ್ನೇಹಿತರೊಂದಿಗೆ ಕಳೆಯಿರಿ ಸಮಯ
ಮನಸ್ಸು ಅರಳಿದಾಗ ಎಲ್ಲ ಸ್ನೇಹಮಯ
--
ಆಪತ್ಕಾಲದಲ್ಲಿ ಆಪತ್ಬಾಂಧವನ ಅವತಾರ
ಅಂತರಂಗದ ಸೌಹಾರ್ದಕ್ಕಾಗಿ ಸಾಕಾರ
ಪವಿತ್ರ ಸ್ನೇಹದಲ್ಲಿ ಅಪಾರ ಮಮಕಾರ
ನಯನ ಮನೋಹರ ನಿಷ್ಕಲ್ಮಶ ನಿರ್ವಿಕಾರ
--
ನೋವಲ್ಲಿ ನೊಂದವರಿಗೆ ದಿವ್ಯ ಚೇತನ
ಜೀವಕ್ಕೆ ಜೀವಾಳ ಆಪ್ತನ ಈ ಗೆಳೆತನ
ಕತ್ತಲ ದಾರಿ ಹಿಡಿದವರಿಗೆ ಬೆಳಕಿನ ಕಿರಣ
ಜೀವನಕ್ಕೆ ದಾರಿದೀಪ ಪ್ರಜ್ವಲ ಪ್ರತಿಭಾನ




Monday, 13 July 2015

ನಲ್ಲೆಗೆ ನಲ್ಮೆಯ ಕಾಣಿಕೆ...

ನಾ ಹಾಕುವೆ ನಿನಗೆ ಪ್ರೇಮದುಂಗುರ
ನೀಡುವೆಯಾ ನನಗೆ ಒಲವಿನುಂಗುರ
ನಲ್ಲೆಗಾಗಿ ನಾಜೂಕಾದ ಚಿನ್ನದುಂಗುರ
ಆಗ ನಿನ್ನ ಮನಸು ಬಲು ಸುಮಧುರ
--
ನುಣುಪಾದ ನಿನ್ನ ಕೈ ಸೇರಲು ಉಂಗುರ
ಮನದ ಮಾತು ಬಿಚ್ಚಿಡು ನೀ ಮಧುರ
ಅರಳಿದ ಮಲ್ಲಿಗೆ ನೀ ನೋಡಲು ಸುಂದರ
ಮನದಲ್ಲಿ ಮೂಡಿರಲಿ ಚೆಲುವು ಚಿತ್ತಾರ
--
ಪ್ರಖರ ಸೂರ್ಯರಶ್ಮಿ ಕಿರಣಗಳ ವಯ್ಯಾರ
ಕಿರಣಗಳ ರಶ್ಮಿಗೆ ಹೂರಾಶಿ ಅರಳಿತು ಸರಸರ
ಇಮ್ಮಡಿಸಿ ಹೂಗಳ ಸೌಂದರ್ಯ ಮಿರಮಿರ
ನಲ್ಲೆ, ನೀ ನೋಡು ಹೂಗಳ ಸಂಭ್ರಮದ ಸಾರ
--
ಮಾಡಲು ಸದಾ ಸಿದ್ಧ ಪ್ರೀತಿಗಾಗಿ ನಾ ಸಮರ
ಸಮರ ಸಾಧಿಸಿ ತೋರಿಸುವೆ ಪ್ರೇಮ ಅಮರ
ಅಮರ ಪ್ರೇಮದ ಕಥೆ ಹೇಳಿತು ಮಾಮರ
ಕೋಗಿಲೆ ಹಾಡಿ ಸಾರಿತು ಪ್ರೀತಿ ಅಜರಾಮರ




Friday, 3 July 2015

ಸಂಪ್ರೀತಿಯ ಸುಳಿಯಲ್ಲಿ...

ಸುಂದರ ಸುಲಲಿತೆ, ಹಂದರದ ಲತೆ
ನಿಸರ್ಗದಿ ನಳನಳಿಸುವ ತರುಲತೆ
ಮಂಜುಳ ಮಧುರ ಕಂಠದ ವನಿತೆ
ನಾ ಆರಾಧಿಸುವ ಹೃದಯ ದೇವತೆ
--
ಸಾಗರದಾಳದಲ್ಲಿ ಸುಳಿದಿದೆ ಸೆಳವು
ಜುಳುಜುಳು ನೀರಿನಲ್ಲಿ ನಿನ್ನ ಸುಳಿವು
ನೀರಲ್ಲಿ ಕಾಣ್ತಿದೆ ಆ ನಿನ್ನ ನಲಿವು
ತಿಳಿಸು ನನಗೆ ಪ್ರೇಮದ ನಿಲುವು
--
ಓ ನಲ್ಲೆ, ನೀನಲ್ಲ ಅಂತಿಂಥ ಹೆಣ್ಣು
ಬಲು ಸುಂದರ ಆ ನಿನ್ನ ಕಣ್ಣು
ನೀ ನಕ್ಕರೆ ಸಿಕ್ಕಿತು ನನಗೆ ಹೊನ್ನು
ನೀ ನಗದಿದ್ದರೆ ನಾ ಮಣ್ಣಲ್ಲಿ ಮಣ್ಣು
--
ಸಂಪ್ರೀತಿ ಸುಳಿಗೆ ನಿನ್ನ ನಗುವೆ ಕನ್ನಡಿ
ನೀ ಹೇಳು ನನಗೆ ಒಲವಿನ ನಾಣ್ನುಡಿ
ಮೆಲ್ಲಗೆ ಮಾತನಾಡು ನೀ ಮೆಲ್ನುಡಿ
ಬರೆಯುವೆಯಾ ಪ್ರೀತಿಗೆ ಮುನ್ನುಡಿ