Wednesday, 11 January 2012

Dr.Rajappa Dalavai Interview (Published)


ಕ್ರಿಯಾಶೀಲ ರಂಗ ನಿರ್ದೇಶಕ ಡಾ.ದಳವಾಯಿ..

ಪರಿಣತಿ ಸಾಧಿಸುವದು ಒಂದು ಸವಾಲು, ಆದರೆ ಅಂತಹ ವಿಚಾರಗಳಲ್ಲಿ ಸವಾಲುಗಳನ್ನು ಆಸಕ್ತಿಯಿಂದ ಸ್ವೀಕರಿಸಿ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿ, ಗಟ್ಟಿಯಾಗಿ ನೆಲೆ ನಿಂತವರು ಕೆಲವೇ ವ್ಯಕ್ತಿಗಳು, ಅಂತಹ ಸಾಧಕರಲ್ಲಿ ರಂಗ ರತ್ನ ಪ್ರಶಸ್ತಿ ವಿಜೇತ ಡಾ.ರಾಜಪ್ಪ ದಳವಾಯಿ ಒಬ್ಬರು. ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ, ವೈವಿಧ್ಯಮಯವಾದ ಕ್ಷೇತ್ರಗಳಲ್ಲಿ ತೊಡಗಿಕೊಂಡು ವಿಶಿಷ್ಟ ಶೈಲಿಯ ಕಲೆಯನ್ನು ರೂಡಿಸಿಕೊಂಡಿರುವ ಇವರು ವಿಮರ್ಶಕರಾಗಿ, ಸಂಪಾದಕರಾಗಿ, ಸಿನಿಮಾ ನಿದರ್ೇಶಕರಾಗಿ, ರಂಗಭೂಮಿ, ಜಾನಪದ, ಸಂಗೀತ ಹೀಗೆ ಹಲವಾರು ಕೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಶಿವನಿ ಬಳಿಯ ಅನುವನಹಳ್ಳಿಯ ಕುರುಬ ಜನಾಂಗದ ಕಡು ಬಡತನ ಕುಟುಂಬದಲ್ಲ್ಲಿ ಜನಿಸಿರುವ ಇವರು ಮಾಡಿದ ಸಾಧನೆ ಅಮೋಘವಾಗಿದೆ. ಕಷ್ಟ, ಸುಖಗಳನ್ನು ಅನುಭವಿಸಿದ ಇವರ ಬದುಕು ಏಳು, ಬೀಳುಗಳನ್ನು ಕಂಡಿದೆ. ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ 1985ರಲ್ಲಿ ಎಂ.ಎ ಪದವಿ ಪಡೆದು, ಎಂ.ಎಂ, ಪಿ.ಜಿ.ಡಿ.ಎಫ್, ಎಂ.ಫಿಲ್, ಪಿಎಚ್.ಡಿ, ಪದವಿಗಳನ್ನು ಪಡೆದಿದ್ದಾರೆ.

 'ಸ್ವಾತಂತ್ರ್ಯಪೂರ್ವದ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ವಸ್ತುಗಳು' ಎಂಬ ವಿಷಯ ಕುರಿತು ಸಂಶೋಧನೆ ನಡೆಸಿದ್ದಾರೆ. ಕಪ್ಪು ದಾರಿಯ ಕೆಂಪು ಚಿತ್ರ, ಸಗಟು ಕವಿಯ ಚಿಲ್ಲರೆ ಪದ್ಯಗಳು, ನೆನಪುಗಳು ಸಾಯುವದಿಲ್ಲ, ಹಕ್ಕಿ ಪಿಕ್ಕಿಯರ ಸಂಸ್ಕೃತಿ, ಏಳೂರು ದೇವರ ಕಾಳಗ, ಇವು ಇವರ ಕೃತಿಗಳು. ಅಂತರ್ಗಟ್ಟೆವ್ವ, ರಕ್ತದ ಬಣ್ಣ ಕಪ್ಪು, ಚಲನ, ಡೋಲಿ, ತಿಳಿವಳಿಕೆ, ಓದು-ಬರಹ, ಸಿನಿಮಾ ಮೀಮಾಂಸೆ, ಕೃತಿ ಆಕೃತಿ, ಉಳುಮೆ, ಸಂಸ್ಕೃತಿ ನಿರ್ವಚನ, ಬೆಳೆ ಮತ್ತು ಸುಯೋಧನ ಎಂಬ ಹನ್ನೆರಡು ಕೃತಿಗಳು ಏಕಕಾಲದಲ್ಲಿ ಪ್ರಕಟಗೊಂಡ ದಳವಾಯಿ ಡಜನ್ ಕೃತಿಗಳೆನಿಸಿಕೊಂಡಿವೆ.

ಕದ್ದವರ್ಯಾರಣ್ಣ ಬೀಜಗಳ, ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ ಎಂಬ ಬೀದಿ ನಾಟಕಗಳು, 'ಕುಲಂ' ಎಂಬ ಪಂಪಭಾರತದ ಕರ್ಣನನ್ನು ಕುರಿತ ಪ್ರಸಿದ್ಧ ನಾಟಕವಾಗಿದೆ.. ಇವರ ಹಲವಾರು ಸಂಶೋದನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

ಇವರು ಕನ್ನಡ ರಂಗಭೂಮಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗೆ ಡಾ.ನಲ್ಲೂರು ಪ್ರಸಾದ್ ಪ್ರಶಸ್ತಿ, ಇವರ ಮುಡಿಗೇರಿವೆ. ವಿವಿಧ ಸಂಘ, ಸಂಸ್ಥೆಗಳಿಂದ ಗೌರವ, ಸನ್ಮಾನಗಳು ದೊರೆತಿವೆ.

ಪ್ರಸ್ತುತ ಇವರು ಗುಲಬಗರ್ಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಯಕವೇ ಕೈಲಾಸವೆಂದು ತಿಳಿದು ತಮ್ಮ ಕಾರ್ಯದಲ್ಲಿ ಮಗ್ನರಾಗಿ ಕ್ರಿಯಾಶೀಲ, ನಿತ್ಯಪರಿವರ್ತನಾಶೀಲ ಗುಣ ಸ್ವಭಾವ ಅಳವಡಿಸಿಕೊಂಡಿರುವ ಇವರು ತಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ನಾಟಕ ಅಕಾಡೆಮಿ ಪ್ರಶಸ್ತಿ, ನಲ್ಲೂರು ಪ್ರಶಸ್ತಿ ದೊರೆತ ಬಗ್ಗೆ ನಿಮ್ಮ ಅನಿಸಿಕೆ?

ನಾಟಕ ಅಕಾಡೆಮಿ ಪ್ರಶಸ್ತಿ ಒಂದು ವಿಶೇಷ ಸಂದರ್ಭ ಪ್ರಶಸ್ತಿ. ಸಾಹಿತ್ಯ ಅಕಾಡೆಮಿ ಆರಂಭವಾಗಿ ಐವತ್ತು ವರ್ಷ ಗತಿಸಿದೆ. ಈ ಅವಧಿಯಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿ, ಐವತ್ತು ಜನಕ್ಕೆ ಸನ್ಮಾನಿಸಿ ಜೀವಮಾನದ ಸಾಧನೆ ಹಿನ್ನೆಲೆಯಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ನಾಟಕಕಾರ, ವಿಮರ್ಶಕ, ರಂಗಕಮರ್ಿ ಪರವಾಗಿ ನನ್ನನ್ನು ಗುರುತಿಸಿದ್ದಾರೆ. ಒಳ್ಳೆಯ ಅಧ್ಯಾಪಕನಿಗೆ ರಂಗಭೂಮಿಯ ನಂಟಿರಬೇಕು ಹಾಗೂ ರಂಗಭೂಮಿ ಕುರಿತು ಅಂಕಣ ಬರೆಯುತ್ತಿದ್ದ್ದೇನೆ. ಪ್ರಶಸ್ತಿಗಳನ್ನು ನಾವು ಬಯಸಿರುವದಿಲ್ಲ. ಪ್ರಶಸ್ತಿಗಳು ದೊರೆತ ಸಂದರ್ಭದಲ್ಲಿ ಭರವಸೆ ಮೂಡುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ಮಾಡಲು ಪ್ರೋತ್ಸಾದಾಯಕವಾಗಿರುತ್ತದೆ.

ನಿಮಗೆ ಬರವಣಿಗೆಯ ಬದುಕಾಗಲು ಕಾರಣ?

ನಾನು ಮೊದಲು ನಿರುದ್ಯೋಗಿ, ಬದುಕಿನ ಅನಿವಾರ್ಯತೆಗಳು, ಹತ್ತಾರು ವರ್ಷ ಬಳಲಿದ ಅನುಭವ ಬರಹಗಾರನಾಗಲು ಪ್ರೇರೇಪಿಸಿತು. ವಿಶ್ವವಿದ್ಯಾಲಯ ಮಟ್ಟದಲ್ಲಿ ಕಲಿಯುವದು ಒಂದು ಹಂತ. ಬದುಕಿನಿಂದ ಕಲಿಯುವ ಕಲಿಕೆ ಮನುಷ್ಯನ ಜೀವನ ರೂಪಿಸುತ್ತದೆ. ಜೀವನದಲ್ಲಿ ಬರುವಂತಹ ಅನಿವಾರ್ಯ ಸಂದರ್ಭಗಳು ಕವಲು ದಾರಿಗಳಾಗಿ ಒಂದು ಹಂತಕ್ಕೆ ತಂದು ನಿಲ್ಲಿಸುತ್ತವೆ. ವಿಶ್ವವಿದ್ಯಾಲಯದಿಂದ ಸಮಾಜ ಅಪಾರವಾದುದನ್ನು ಬಯಸುತ್ತದೆ. ಮೂಲತ: ನಾನು ಚಿತ್ರ ಕಲಾವಿದ, ಆಮೇಲೆ ಸಾಹಿತ್ಯದ ವಿದ್ಯಾಥರ್ಿ, ಸಿನಿಮಾ, ನಾಟಕ, ಸಂಗೀತ ಈ ಎಲ್ಲಾ ಕ್ಷೆತ್ರಗಳಲ್ಲಿ ಕೆಲಸ ಮಾಡಿದ ಅನುಭವ ಒಬ್ಬ ಒಳ್ಳೆಯ ಅಧ್ಯಾಪಕನನ್ನಾಗಿ ರೂಪಿಸಿವೆ.

ನಾಟಕ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?

ಬಾಲ್ಯದಿಂದಲೂ ನನಗೆ ನಾಟಕದಲ್ಲಿ ಆಸಕ್ತಿ, ನಮ್ಮ ಹಳ್ಳಿಯಲ್ಲಿ ಬಯಲಾಟ ತುಂಬಾ ಪ್ರಸಿದ್ಧ, ಬಯಲಾಟದಲ್ಲಿ ನಾನು ಭಾಗವಹಿಸುತ್ತಿದ್ದೆ. ಪ್ರಸಿದ್ಧ ರಂಗ ನಿದರ್ೇಶಕ ಅಶೋಕ ಬಾದರದಿನ್ನಿ ನನ್ನ ಮೊದಲ ರಂಗ ಗುರು. ಅವರು 'ಎ ಮಿಸ್ಸೆಮರ್ ನೈಟ್ ಡ್ರೀಮ್ಸ್' ಷೇಕ್ಸ್ಪಿಯರ್ನ ನಾಟಕ ಕಲಿಸಿದ್ದರು. ಅದರಲ್ಲಿ ನನ್ನದೊಂದು ಚಿಕ್ಕ ಪಾತ್ರ, ಅವರು ಮಾಡಿದ ರಂಗಭೂಮಿಯ ಸಿದ್ದಾಂತ, ಅದರ ಕುರಿತ ವ್ಯಾಖ್ಯಾನಗಳು ಇವೆಲ್ಲವೂ ನನ್ನನ್ನು ರಂಗಭೂಮಿ ಕಡೆಗೆ ಆಕéಷರ್ಿಸಿದವು. ಆಗ ಮೈಸೂರಿನಲ್ಲಿ ರಂಗಭೂಮಿ ಶುರುವಾಗಿತ್ತು. ರಂಗಾಯಣದ ನಾಟಕಗಳನ್ನು ನೋಡುತ್ತ ಎರಡು ದಶಕಗಳು ಕಳೆದವು, ರಂಗಾಯಣ ಒಂದು ರೀತಿಯಲ್ಲಿ ನಾಟಕಕಾರನನ್ನಾಗಿ ರೂಪಿಸಿತು. ಒಳ್ಳೆಯ ನಾಟಕಗಳನ್ನು ನೋಡಿದರೆ ನಾಟಕಕಾರನಾಗಲು ಸಾಧ್ಯವಿಲ್ಲ. ಅದರಲ್ಲಿ ಭಿನ್ನವಾಗಿ ತೊಡಗಿಕೊಳ್ಳಬೇಕು. ರವೀಂದ್ರ ಕಲಾ ಕ್ಷೇತ್ರದ ಒಬ್ಬ ಸಾಮಾನ್ಯ ಪ್ರೇಕ್ಷಕ ನಾನು, ಮುಂದೊಂದು ದಿನ ನಾನೊಬ್ಬ ನಾಟಕಕಾರ ಆಗಬಹುದು, ಇದೇ ರಂಗಮಂದಿರದಲ್ಲಿ ನಿದರ್ೇಶನ ಮಾಡಬಹುದು ಎಂದು ನಾನು ಕಲ್ಪಿಸಿಕೊಂಡೇ ಇರಲಿಲ್ಲ.

ಕನ್ನಡ ರಂಗಭೂಮಿಯ ಪ್ರಸ್ತುತ ಸ್ಥಿತಿಗತಿ ಹೇಗಿದೆ?

ಕನ್ನಡ ರಂಗಭೂಮಿ ಸೃಜನಶೀಲ ಮಾಧ್ಯಮವಾಗಿದ್ದು ಅತ್ಯಂತ ಪ್ರಯೋಗಶೀಲವಾಗಿದೆ. ಇಂದು ಆಸಕ್ತ ಕಲಾವಿದರು ಹಾಗೂ ಯುವಕರು ಈ ಕ್ಷೇತ್ರದ ಕಡೆ ಹೆಚ್ಚು ಹೆಚ್ಚು ಆಕಷರ್ಿತರಾಗಿದ್ದಾರೆ ಪ್ರಸಕ್ತ ದಿನಮಾನಗಳಲ್ಲಿ ತಾಂತ್ರಿಕ ಮಾಧ್ಯಮಗಳಾದ ದೂರದರ್ಶನ, ಸಿನಿಮಾ ಮಾಧ್ಯಮಗಳು ಸೃಷ್ಟಿಯಾಗಿವೆ. ಅದಾಗ್ಯೂ ಕನ್ನಡ ರಂಗಭೂಮಿ ಜೀವಂತ ಮಾಧ್ಯಮವಾಗಿದ್ದು ಇಂದು ಪ್ರಯೋಗಶೀಲವಾಗಿದೆ. ಹಾಗೂ ಸಕ್ರಿಯವಾಗಿದೆ ಆದರೆ ಆದಾಯಕ್ಕಿಂತ ಪರಿಣಾಮಕಾರಿ ಜನ ಮಾಧ್ಯಮವಾಗಿದೆ. ಸಿನಿಮಾದಲ್ಲಿ ಗ್ಲಾಮರ್ ಇರುತ್ತದೆ, ಆದಾಯ ಹೆಚ್ಚು. ರಂಗಭೂಮಿಯಲ್ಲಿ ಹೆಚ್ಚು ಆದಾಯದ ಸಾಧ್ಯತೆಗಳು ಕಡಿಮೆ, ರಂಗಭೂಮಿಯಲ್ಲಿ ಲಾಭ ಇಲ್ಲ. ಆದರೆ ಅದು ಪ್ರತಿಭೆಗಳನ್ನು ನಿಮರ್ಾಣ ಮಾಡುತ್ತದೆ.

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಬೀರಿದೆಯೇ?

ಕನ್ನಡ ರಂಗಭೂಮಿಯ ಮೇಲೆ ಪಾಶ್ಚಾತ್ಯ ರಂಗಭೂಮಿ ಪ್ರಭಾವ ಇದೆ. ಮೊದಲು ಬೇರೆ ಭಾಷೆಯ ರಂಗಭೂಮಿ ಭಾರತೀಯ ಸಂಸ್ಕೃತಿ, ಜೀವನ ಶೈಲಿ ಮತ್ತು ಭಾಷೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ದೇಶಿಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕನ್ನಡ ರಂಗಭೂಮಿ ದೇಶಿಯ ಸಂಸ್ಕೃತಿಯ ಜೊತೆಗೆ ಪಾಶ್ಚಿಮಾತ್ಯ ರಂಗಭೂಮಿಯ ಕೆಲವು ಸಾಹಿತ್ಯಗಳ ಪ್ರಭಾವದಿಂದ ಪ್ರಭಾವಿತವಾಗಿರುವುದು ಉಂಟು.  ಭಾರತೀಯ ರಂಗಭೂಮಿ ಕೂಡ ಪಾಶ್ಚಾತ್ಯರ ಮೇಲೆ ಪ್ರಭಾವ ಬೀರಿದೆ, ಪೀಟರ್ ಬ್ರೂಕ್ ಎನ್ನುವವರು ಹನ್ನೆರಡು ಘಂಟೆಗಳ ಕಾಲ 'ಮಹಾಭಾರತ' ನಿದರ್ೇಶನ ಮಾಡಿದರು. ನಾಟಕ ಒಂದು ಜಾಗತಿಕ ಭಾಷೆ. ಸಿನಿಮಾ ನಾಟಕದಲ್ಲಿ ಭಾಷೆ ಮುಖ್ಯ ಅಲ್ಲ. ಅನುಭವ ಮುಖ್ಯ. ಅದೊಂದು ಜಾಗತಿಕ ವ್ಯಾಕರಣ ಕ್ಷೇತ್ರ. ಕನ್ನಡದ ಅಗ್ನಿ ಮತ್ತು ಮಳೆ ಅಮೇರಿಕನ್ ನಾಟಕದ ಮೇಲೆ ಪ್ರಭಾವ ಬೀರಿದೆ. ರಂಗಭೂಮಿಯ ವೈಶಿಷ್ಟ್ಯ ಎಲ್ಲಿದ್ದರೂ ಪ್ರಭಾವ ಬೀರುತ್ತದೆ.

ಭಾರತೀಯ ಸಂಸ್ಕೃತಿಗೆ ರಂಗಭೂಮಿಯ ಕೊಡುಗೆ?

ನಾಟಕಗಳು ಮನುಷ್ಯ ಸಂಸ್ಕೃತಿಯ ನಿಜಸ್ವರೂಪದ ಪ್ರತಿಬಿಂಬಗಳಾಗಿವೆ. ಸಮಾಜದ ವಾಸ್ತವ ವಸ್ತು ಸ್ಥಿತಿಯನ್ನು ನಿಮರ್ಾಣ ಮಾಡುವ ನಾಟಕಗಳು ಜನರ ಜೀವನ ಕಲೆಯನ್ನು ಓರೆಗೆ ಹಚ್ಚುತ್ತದೆ. ಅಲ್ಲದೆ ಸ್ವಸಾಮಥ್ರ್ಯದಿಂದ ಸ್ಥಳೀಯ ಸಂಸ್ಕೃತಿ, ಆಚಾರ ವಿಚಾರ, ಜನಜೀವನ ಶೈಲಿ, ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪ್ರಭಾವಿ ಮಾಧ್ಯಮವಾಗಿ, ಕನ್ನಡ ರಂಗಭೂಮಿ ಕನಸ್ಸನ್ನು ಕಟ್ಟಿ ಕೊಡುತ್ತಾ ಬದುಕನ್ನು ಅರ್ಥ ಮಾಡಿಸುತ್ತದೆ. ಬದುಕು ಕಟ್ಟಿಕೊಳ್ಳುವದನ್ನು ಹೇಳುತ್ತದೆ. ಬೇರೆ ಶಿಷ್ಟ ಮಾಧ್ಯಮಗಳು ಜನರ ಬದುಕು ಹೇಗಿರಬಹುದಿತ್ತು ಎಂದು ತಿಳಿಸುತ್ತದೆ. ಬದುಕು ಹೇಗಿರಬೇಕೆಂದು ತಿಳಿಸುವದೇ ರಂಗಭೂಮಿ. ಇದೇ ಭಾರತೀಯ ಸಂಸ್ಕೃತಿಗೆ ಕೊಟ್ಟಿರುವ ಕೊಡುಗೆ.

ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರಗಳಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರಶಸ್ತಿಗಳ ಆಯ್ಕೆಯಲ್ಲಿ ಅನೇಕ ವಿಚಾರಗಳನ್ನು ಚಚರ್ೆ ಮಾಡಿ ನಿದರ್ಿಷ್ಟವಾದ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ಕೊಡಲಾಗುತ್ತದೆ. ನಾನು ಕೂಡ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕೆಲಸ ನಿರ್ವಹಿಸಿದ್ದೇನೆ. ಅನೇಕ ವಿಷಯಗಳನ್ನು ಚಚರ್ೆಗೆ ತಂದು, ಸದಸ್ಯರು ಯಾರನ್ನು ಒಪ್ಪಿಕೊಳ್ಳುತ್ತಾರೆ, ಆ ವ್ಯಕ್ತಿಯ ಬಗ್ಗೆ  ಕೂಲಂಕಷವಾಗಿ ತಿಳಿದು ಚಚರ್ೆ ನಡೆಸಲಾಗುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಶಸ್ತಿಗಳು ಪ್ರಜಾಪ್ರಭುತ್ವದಿಂದ ಕೂಡಿರುತ್ತವೆ. ಕೆಲವು ಸಾರಿ ಕೆಲವರ ಪ್ರಾಬಲ್ಯ ಅಧಿಕವಾಗಿರುತ್ತದೆ. ಪ್ರಶಸ್ತಿಗಳ ಆಯ್ಕೆಯಲ್ಲಿ ಅಪಸ್ವರ ಹೇಳಬಹುದು, ಏಕೆಂದರೆ ಆಪೇಕ್ಷಿತರ ಪಟ್ಟಿ ಅಧಿಕವಾಗಿರಬಹುದು. ಕ್ಷೇತ್ರದಲ್ಲಿ ಗಣನೀಯ ಸಾಧನೆ, ಕೊಡುಗೆಗಳನ್ನು ಪರಿಗಣಿಸಿ ಚೆನ್ನಾಗಿ ಕೆಲಸ ಮಾಡಿದವರನ್ನು ಯಾವ ಪ್ರಸಸ್ತಿಗಳು ಮರೆತಿಲ್ಲ.

ನಾಟಕ ಸಾಹಿತ್ಯ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆಗಳೇನು?

ಸಾಹಿತ್ಯ ಅಭಿರುಚಿ ಬೆಳೆಯಲು ಮೊದಲು ನಿರಂತರವಾದ ಓದು, ವಿಭಿನ್ನ ರೀತಿಯಲ್ಲಿ ಓದುವದು ಬಹಳ ಅಗತ್ಯವಾಗಿದೆ. ವ್ಯವಸ್ಥಿತವಾದ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಸಾಹಿತ್ಯ ರುಚಿ ಮೂಡಿದರೆ ಅಭ್ಯಾಸದಿಂದ ಸಾಧನೆ ಸಾಧ್ಯ. ನಿರಂತರ ಓದುವವರು ಮಾತ್ರ ಸಾಹಿತ್ಯ ಕಲಿಕೆಗೆ ಸೇರಬೇಕು. ಈ ದಿಶೆಯಲ್ಲಿ ವಿದ್ಯಾಥರ್ಿಗಳು ಅಭ್ಯಾಸದಲ್ಲಿ ನಿರತರಾಗಬೇಕು.


-ಅಮರೇಶ ನಾಯಕ ಜಾಲಹಳ್ಳಿ
Cell-9945268059

No comments:

Post a Comment