Wednesday, 11 January 2012

Dr.vikram Visaji Interview (Published)


'ಶ್ರೀವಿಜಯ' ಪ್ರಥಮ ಪ್ರಶಸ್ತಿಯ ಡಾ.ವಿಕ್ರಮ್ ವಿಸಾಜಿ

ಡಾ. ವಿಕ್ರಮ್ ವಿಸಾಜಿ ಕಿರಿಯ ವಯಸ್ಸಿನ ಹಿರಿಯ ಸಾಹಿತಿ... ಕನ್ನಡ ಸಾಹಿತ್ಯ ಪರಿಷತ್ತು 40 ವರ್ಷದೊಳಗಿನ ಸಾಹಿತಿಗಳಿಗಾಗಿಯೇ ಸ್ಥಾಪಿಸಿರುವ 'ಶ್ರೀವಿಜಯ' ಪ್ರಥಮ ಪ್ರಶಸ್ತಿಗೆ ಭಾಜನರಾಗಿ, ಕಿರಿಯ ವಯಸ್ಸಿನ ಹಿರಿಯ ಸಾಹಿತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯ ಪರಿಷತ್ತಿನ ಈ 'ಶ್ರೀವಿಜಯ' ಪ್ರಥಮ ಪ್ರಶಸ್ತಿಗೆ ಈ ಹೈದರಾಬಾದ್ ಕರ್ನಾಟಕ ದ ಯುವಕ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ಡಾ. ವಿಕ್ರಮ್ ವಿಸಾಜಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನವರು. 1976ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಭಾಲ್ಕಿಯ ಸತ್ಯನಿಕೇತನ ಪ್ರೌಢ ಶಾಲೆಯಲ್ಲಿ ಪಡೆದು, ನಂತರ ಚನ್ನಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಪದವಿ, ನಂತರ ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್ಡಿ (ಡಾಕ್ಟರೇಟ್) ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ಡಾ. ವಿಕ್ರಮ್ ವಿಸಾಜಿ, ಅಧ್ಯಯನ, ಅಧ್ಯಾಪನ ಎರಡರಲ್ಲೂ ಅನುಭವ ಸಂಪಾದಿಸಿರುವ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದವರು. ಉತ್ತಮ ಭಾಷಣಕಾರರು. ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ, ಎಂ.ಎ ಕನ್ನಡ ಹಾಗೂ ಪಿ.ಎಚ್ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ  ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೀವೇಕೆ ಕತ್ತಲ ಕಡೆ, ತಮಾಷಾ, ಗೂಡು ಕಟ್ಟುವ ಚಿತ್ರ, ಇವು ಇವರ ಕವನ ಸಂಕಲನಗಳಾಗಿವೆ. ಹುಚ್ಚು ದಾಳಿಂಬೆ ಗಿಡ ಇವರ ಗ್ರೀಕ್ ಕವಿತೆಗಳ ಅನುವಾದ. ಬೆಳಗಿನ ಮುಖ ಇವರ ವಿಮರ್ಶಾ ಕೃತಿ. ನಾದಗಳು ನುಡಿಯಾಗಲಿ ಇವರ ಸಂಶೋಧನಾ, ಕೃತಿ, ಡಾ.ಚಂದ್ರಶೇಖರ ಕಂಬಾರರ ನಾಟಕಗಳು ಇವರ ಸಂಪಾದನೆ ಕೃತಿಯಾಗಿದೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜು ವತಿಯಿಂದ ದ.ರಾ. ಬೇಂದ್ರೆ ಕಾವ್ಯಸ್ಪರ್ಧೆಯಲ್ಲಿ 6 ಸಲ ಬಹುಮಾನ ಪಡೆದಿದ್ದು, ಧಾರವಾಡದ ಜೆಸಸ್ ಕಾಲೇಜು ವತಿಯಿಂದ ಕವಿತೆಗಾಗಿ ಬಹುಮಾನ. ಚಂಪಾರವರ ಸಂಕ್ರಮಣ ಪತ್ರಿಕೆ ವತಿಯಿಂದ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎರಡು ಸಲ ಪುರಸ್ಕಾರ ಪಡೆದಿದ್ದಾರೆ. ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ತು ವತಿಯಿಂದ ಯುವ ಲೇಖಕ ಪ್ರಶಸ್ತಿ. ಪ್ರಥಮ ಬಾರಿಗೆ ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಕಟಿಸಿರುವ 'ಶ್ರೀವಿಜಯ' ಪ್ರಶಸ್ತಿಗೆ ಇದೀಗ ಭಾಜನರಾಗಿದ್ದಾರೆ. ಯುವಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ 40 ವರ್ಷದ ಒಳಗಿನವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ 'ಶ್ರೀವಿಜಯ' ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ. ಅದರ ಜೊತೆಗೆ 1,11,111 ರೂ ನಗದು ಬಹುಮಾನವನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ. ಡಿಸೆಂಬರ್ (2011) ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ..

ಕಲ್ಯಾಣ ಕರ್ನಾಟಕದ ಗಡಿನಾಡು ಪ್ರದೇಶದ ಯುವ ಪ್ರತಿಭೆ, ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೀರ್ತಿ ಇವರದು. ಈ ಭಾಗದಲ್ಲಿ ಹಲವಾರು ಜನ ಯುವ ಸಾಹಿತಿಗಳಿದ್ದಾರೆ. ಸರಕಾರ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಈ ಯುವ ಲೇಖಕರಿಗೆ, ಯುವ ಸಾಹಿತಿಗಳು ಮಾದರಿ.

'ಶ್ರೀ ವಿಜಯ' ಪ್ರಶಸ್ತಿ ಲಭಿಸಿರುವ ನಿಮಗೆ ಏನನಿಸುತ್ತದೆ?

ಯುವ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಪ್ರಶಸ್ತಿ ದೊರೆತಿದೆ ಎಂದು ನನ್ನ ಅಭಿಪ್ರಾಯ. ಇನ್ನೂ ಹೆಚ್ಚಿನ ಬರವಣಿಗೆಗೆ ಇದು ಸೂಚನೆಯಾಗಿದೆ. ಜವಾಬ್ದಾರಿ ಹೆಚ್ಚಾಗಿದೆ, ನಿರೀಕ್ಷೆಗಳು ಜಾಸ್ತಿಯಾಗಿವೆ. ಸಾಹಿತ್ಯ ಪರಿಷತ್ತು ಇಟ್ಟಿರುವ ಭರವಸೆ ನಾವು ಪ್ರೀತಿಯಿಂದ, ಶ್ರದ್ಧೆಯಿಂದ ಬರವಣಿಗೆಯಲ್ಲಿ ತೊಡಗಿ ಕೊಳ್ಳಬೇಕಾಗಿದೆ ಎಂದು ತಿಳಿದಿದ್ದೇನೆ.
ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯಿಕ ವಲಯದಲ್ಲಿ ಅಗಾಧವಾದ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು?
ಮನೆಯಲ್ಲಿ ಒಳ್ಳೆಯ ವಾತಾವರಣ, ನಮ್ಮ ತಂದೆಯವರು ಕನ್ನಡ ಅಧ್ಯಾಪಕರಾಗಿದ್ದರು. ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಕಥೆ, ಕವನದ ಅನೇಕ ಪುಸ್ತಕಗಳು ಮನೆಯಲ್ಲಿದ್ದವು. ಸಾಹಿತ್ಯ ಕಾರ್ಯಕ್ರಮ (ನಾಟಕ, ಗೋಷ್ಠಿ, ಸಂಗೀತ ಸಭೆ) ಗಳಲ್ಲಿ ನಾನು ತಂದೆಯವರ ಜೊತೆ ಭಾಗಿಯಾಗುತ್ತಿದ್ದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಬೆಳೆಯ ತೊಡಗಿತು. ಅನೆಕ ಲೇಖಕರ (ಹಾ.ಮಾ.ನಾಯಕ, ಎಲ್.ಎಸ್.ಶೇಷಗಿರಿರಾವ್, ಚಂದ್ರಶೇಖರ್ ಪಾಟೀಲ್, ರಹಮತ್ ತರೀಕೆರೆ, ಅಮರೇಶ ನುಗಡೋಣಿ) ಜೊತೆ ಸಂಪರ್ಕ, ಸಂವಹನ ಬೆಳೆಯಿತು. ಅವರ ಮಾರ್ಗದರ್ಶನ, ಪ್ರೀತಿ, ಒಡನಾಟ, ಅವರ ಮಾತುಗಳು ನನಗೆ ಬರೆಯಲು ಪ್ರೇರಣೆಯಾಯಿತು.

ಬರಹಗಾರರಲ್ಲಿ ಪ್ರಥಮ ತೊಂದರೆ ಇರುತ್ತದೆ. ಅದನ್ನು ಅವರು ನಿವಾರಿಸಿಕೊಳ್ಳುವುದು ಹೇಗೆ?

ವೈವಿಧ್ಯಮಯವಾದ ಓದು ಬರಹಗಾರರನ್ನು ಸೂಕ್ಷ್ಮನನ್ನಾಗಿ ಮಾಡುತ್ತದೆ. ಕನ್ನಡ ಸಾಹಿತ್ಯ, ಮರಾಠಿ ಸಾಹಿತ್ಯ, ತೆಲುಗು ಸಾಹಿತ್ಯ, ಬಂಗಾಳಿ ಸಾಹಿತ್ಯ ಅನುವಾದದಲ್ಲಾದರೂ ಸರಿ, ಫ್ರೆಂಚ್ ಶೈಲಿ, ಅಮೇರಿಕನ್ ಶೈಲಿ ಓದಿ ತಿಳಿದುಕೊಂಡರೆ ಓದಿನ ಕ್ರಮ ಅರಿತು ಯಾವ ಬರವಣಿಗೆಯೊಳಗೆ ಜೀವಂತಿಕೆ ಇದೆ, ಯಾವ ಬರವಣಿಗೆಯೊಳಗೆ ಜೀವಂತಿಕೆ ಇಲ್ಲ ಎನ್ನುವುದು ತಿಳಿದು, ಓದುವ ದೃಷ್ಟಿಕೋನದಿಂದ ಬರವಣಿಗೆಯ ಪ್ರಥಮ ತೊಂದರೆ ನಿವಾರಿಸಬಹುದು. ನಮ್ಮ ಬರವಣಿಗೆಯ ಸಮಸ್ಯೆಗಳನ್ನು ಮೀರಿ ನಮ್ಮ ಸೃಜನಶೀಲತೆ ಕಾಪಾಡಿಕೊಳ್ಳಬೇಕು.

ಇತ್ತೀಚಿನ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕನ್ನಡದಲ್ಲಿ ಒಂದು ನಿಲುವು, ಘಟ್ಟ ಅನ್ನೋದು ಇಲ್ಲ. ಹಲವಾರು ಸಾಹಿತಿಗಳು, ಅನೇಕ ಲೇಖಕರು ಸೂಕ್ಷ್ಮವಾಗಿ ಬರೆಯುತ್ತಿದ್ದಾರೆ. ಸೂಕ್ಷ್ಮತೆ ಎನ್ನುವದು ಸಾಹಿತ್ಯದಲ್ಲಿ ಅತಿ ಮುಖ್ಯ. ಒಂದು ಗುಂಪಿನ ಮೂಲಕ ಸಾಹಿತ್ಯ ರಚನೆಯಾದರೆ ಅದು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತದೆ, ಚರ್ಚೆಗೊಳಪಡುತ್ತದೆ. ಆದರೆ ಒಬ್ಬ ವ್ಯಕ್ತಿಯ ಬರವಣಿಗೆಯ ಪರಿಶ್ರಮವೂ  ಚರ್ಚೆಯಾಗುತ್ತದೆ. ಆದರೆ ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. (ಹರೀಫ ರಾಜ, ಸುಮಂಗಲ, ಚಿದಾನಂದರ ಅನುವಾದಗಳು, ವಸುಧೇಂದ್ರರ ಪ್ರಬಂಧಗಳು, ಎ.ಎಂ. ಮಂಜುನಾಥ, ಎಂ.ಆರ್. ಭಾಗವತಿ, ಅಂಕೂರ ಬೆಟಗೇರಿ) ಹಲವಾರು ಸಾಹಿತಿಗಳಿದ್ದಾರೆ. ಸಾತ್ವಿಕತೆ, ದಾರ್ಶನಿಕತೆ ಅದು ಎಂಥಹ ರೂಪ ಪಡೆದುಕೊಳ್ಲುತ್ತಿದೆ ಎನ್ನುವಂಥದ್ದು. ಉತ್ತಮವಾದ ವಸ್ತು ವಿಷಯವನ್ನು ಇತ್ತೀಚಿನ ಸಾಹಿತ್ಯ ಒಳಗೊಂಡಿರಬೇಕು.

ಸಾಹಿತ್ಯ ಹಾಗೂ ವಿಮರ್ಶೆ ನಡುವಿನ ಸಂಬಂಧದ ಬಗ್ಗೆ ಏನು ಹೇಳುತ್ತೀರಿ?

ಸಾಹಿತ್ಯ ಬದುಕನ್ನು, ಸಮಾಜವನ್ನು ಸೃಜನಶೀಲವಾಗಿ ಗ್ರಹಿಸುವಂತಹ ಒಂದು ಕ್ರಮ. ಬದುಕಿನ ಚಲನೆಯ ಸಂಬಂಧ ಇದರಲ್ಲಿದೆ. ಸಮಾಜದ ಒಟ್ಟಾರೆ ಒಂದು ಸ್ಥಿತಿಯನ್ನು ಆಳವಾಗಿ, ಸೂಕ್ಷ್ಮವಾಗಿ ಗ್ರಹಿಸುವಂತಹ ಒಂದು ಅವಕಾಶ ಸಾಹಿತ್ಯದಲ್ಲಿದೆ. ಹೀಗೆ ರಚನೆಯಾದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ. ವಿಶ್ಲೇಷಣೆಗೆ ಈ ವಿಮರ್ಶೆ ಅಗತ್ಯ. ಯಾವ ದೃಷ್ಟಿಕೋನದಿಂದ ಓದಿದರೆ ಏನೇನು ಅರ್ಥಗಳು ಬರುತ್ತವೆ ಎನ್ನುವಂಥದ್ದು. ವಿಮರ್ಶೆ ಇಂದು ಬರವಣಿಗೆಯನ್ನು ತೂಕ ಮಾಡುತ್ತದೆ. ಓದಿನ ಸಾಧ್ಯತೆಗಳನ್ನು ತೋರಿಸುತ್ತದೆ. ವಿಮರ್ಶೆ ಬರೆಯುವುದು ತಪ್ಪಲ್ಲ. ಸಾಹಿತ್ಯ ತಪ್ಪು ಅಂತಾನು ಹೇಳಬಾರದು. ಒಂದು ಕೃತಿಯ ಮಿತಿಗಳಿಂದ ಹೊಸ ಬರಹಗಾರರು ಏನು ಕಲಿಯಬಹುದು, ಸಾಧನೆಗೆ ಏನು ಮಾಡಬಹುದು. ಇದನ್ನು ಹೇಳುವ ಕೆಲಸ ವಿಮರ್ಶೆ ಮಾಡುತ್ತದೆ.

ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕಾದರೆ ಅದಕ್ಕೆ ನಿಮ್ಮ ಸಲಹೆಗಳೆನು?

ಪ್ರಥಮವಾಗಿ ಕನ್ನಡ ಮಾಧ್ಯಮ ಶಾಲೆಗಳು ಕ್ರಿಯಾಶೀಲವಾಗಿರಬೆಕು. ಜನರು ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ವಾತಾವರಣ ನಿರ್ಮಾಣವಾಗಬೇಕು. ಬಹಳಷ್ಟು ಶಾಲೆಗಳು ಸಮಸ್ಯೆಗಳಿಂದ ಕೂಡಿವೆ. ಸರಕಾರಿ ಶಾಲೆಗಳು, ಮಾಧ್ಯಮ ಶಾಲೆಗಳು ಮೊದಲಿನಂತೆ ಈಗಿಲ್ಲ. ಬಹಳ ಅಸ್ತವ್ಯಸ್ಥಗೊಂಡಿವೆ. ಕನ್ನಡಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ನಡೆಸುವುದು. ಕನ್ನಡ ಭಾಷೆ ಬೆಳೆಸಲು ಅನುಕೂಲಗಳನ್ನು ಸೃಷ್ಟಿ ಮಾಡಬೆಕು. ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಲ್ಪ ಇತ್ತ ಕಡೆ ಗಮನ ಹರಿಸುವಂತಾಗಬೇಕು.

ಸೆಮಿಸ್ಟರ್ ಪದ್ದತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆಯಾ?

ಈ ಪದ್ದತಿಯಿಂದ ಸ್ವಲ್ಪ ಒತ್ತಡ ಜಾಸ್ತಿಯಾದಂತಿದೆ. ದೀರ್ಘವಾದ ಓದುವಿದ್ಯಾರ್ಥಿಗಳ ಮನನಕ್ಕೆ ತೊಂದರೆಯಾಗಿದೆ. ಉತ್ತಮ ಅಂಕ ಗಳಿಸಲು ಇದು ಸದಾವಕಾಶ. ಆದರೆ ಬರೀ ಅಂಕ ಗಳಿಸುವುದಕ್ಕೆ ಸೀಮಿತವಾಗಿ, ಕಲಿಕೆಯ ಸುಖವನ್ನು ಗೆಳೆಯರ ಜೊತೆ ಹಂಚಿಕೊಳ್ಳಲು ಕಾಲಾವಕಾಶ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಆಳವಾಗಿ ಓದುವುದಕ್ಕೆ, ಚಿಂತನೆಗೆ, ಆಲೋಚನೆಗೆ ಅನುಕೂಲವಾಗುವ ವ್ಯವಸ್ಥೆಯಾಗಬೆಕು. ಒಂದು ದೃಷ್ಟಿಕೋನ ಬೆಳೆಸಿಕೊಂಡು ಓದಿನ ವ್ಯಾಪ್ತಿ, ಓದಿನ ಕ್ರಮ, ಪಠ್ಯದ ಹೊರತು ಜ್ಞಾನ ಗಳಿಕೆಗೆ ದೀರ್ಘ ಓದು ಬೇಕಾಗುತ್ತದೆ.

ಗುಣಮಟ್ಟ ಶಿಕ್ಷಣಕ್ಕೆ ನಿಮ್ಮ ಸಲಹೆಗಳೇನು?

ಸಿಲಬಸ್ ಚನ್ನಾಗಿರಬೇಕು, ಪಾಠ, ಪ್ರವಚನಗಳು ಸುಸೂತ್ರವಾಗಿ ನಡೆಯುತ್ತಿರಬೇಕು. ಸೂಕ್ಷ್ಮಜ್ಞರು ಬೇಕು. ಕಾಳಜಿ ಇರುವಂತಹ ಶಿಕ್ಷಕರು ಅಗತ್ಯ. ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿರಬೇಕು. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಚರ್ಚಿಸುತ್ತಿರಬೇಕು. ಕಲಿಕೆ ನಿರಂತರವಾಗಿರಬೇಕು. ಉತ್ತಮ ವಾತಾವರಣ, ಗ್ರಂಥಾಲಯವೂ ಅವಶ್ಯಕ. ಶಿಕ್ಷಕರು ಚಟುವಟಿಕೆಯಿಂದ ಕ್ರಿಯಾಶೀಲರಾಗಿರಬೇಕು. ವಿಚಾರ ಸಂಕಿರಣಗಳು, ಚರ್ಚಾ ಸ್ಪರ್ಧೆಗಳು, ಕ್ರಿಯಾಶೀಲ ಬರವಣಿಗೆ ಇವೆಲ್ಲಾ ಇದ್ದರೆ ಶಿಕ್ಷಣ ಸುಧಾರಿಸುತ್ತದೆ.



-ಅಮರೇಶ ನಾಯಕ ಜಾಲಹಳ್ಳಿ
Cell-9945268059

No comments:

Post a Comment